ಬೆಳಗ್ಗೆ ಏಳುವಷ್ಟರಲ್ಲಿ ಶೂ, ಚಪ್ಪಲಿ ಮಾಯ, ಈ ಜನರ ಗೋಳು ಕೇಳೋಕೆ ಯಾರೂ ಇಲ್ವಾ? ಏನಿದು? ಯಾಕಿಂಗೆ ಆಗ್ತಿದೆ?

ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 20 ಸೆಪ್ಟಂಬರ್ 2020

ಕೇಸ್ 1

ಕೋವಿಡ್ ಆತಂಕದ ನಡುವೆಯು ಪರೀಕ್ಷೆಗೆ ಸಂಪೂರ್ಣ ಸಿದ್ಧವಾಗಿದ್ದ ವಿದ್ಯಾರ್ಥಿನಿ. ಪರೀಕ್ಷೆಗೆ ಹೊರಡಲು ಸಿದ್ಧಳಾಗಿ ಮನೆಯಿಂದ ಹೊರಬಂದಾಗ ಶೂ, ಚಪ್ಪಲಿಗಳಿಲ್ಲ. ವಿದ್ಯಾರ್ಥಿನಿಗಷ್ಟೆ ಅಲ್ಲ, ಅವರ ಪೋಷಕರು ಗಾಬರಿಯಾದರು. ಆತಂಕಕ್ಕೀಡಾದರು.

ಕೇಸ್ 2

ಹೊಸ ಶೂಗಳು, ಚಪ್ಪಲಿಗಳು. ಹೆಚ್ಚೆಂದರೆ ನಾಲ್ಕೈದು ಬಾರಿ ಬಳಕೆಯಾಗಿತ್ತು. ರಾತ್ರಿ ಊಟ ಮಾಡಿ ಮನೆ ಆವರಣದಲ್ಲೇ ವಾಕಿಂಗ್ ಮುಗಿಸಿ ಒಳಗೆ ಹೋಗುವಾಗ ಬಾಗಿಲ ಬಳಿ ಇದ್ದವು. ಬೆಳಗೆದ್ದು ವಾಕಿಂಗ್ ಹೊರಡೊ ಹೊತ್ತಿಗೆ ಇಡೀ ಚಪ್ಪಲಿ ಸ್ಟಾಂಡ್ ಚಲ್ಲಾಪಿಲ್ಲಿ, ಹೊಸ ಶೂ, ಚಪ್ಪಲಿಗಳು ಮಂಗಮಾಯ.

ಕೇಸ್ 3

ಹಿರಿಯ ಪತ್ರಕರ್ತರೊಬ್ಬರ ಮನೆ. ಮೂರು ತಿಂಗಳಿಂದ ಚಪ್ಪಲಿ ಕಳ್ಳತನವಾಗುತ್ತಿದೆ. ಇವರ ಮನೆಯಲ್ಲಿ ಹೊಸ ಚಪ್ಪಲಿ, ಶೂಗಳನ್ನು ತಂದಿದ್ದಾರೆ ಎಂದು ಅದ್ಯಾರು ವರ್ತಮಾನ ಕೊಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಹೊಸ ಪಾದರಕ್ಷೆಗಳು ಬಂದರೆ ಸಕ್ಕರೆ ಅರಸಿ ಬರುವ ಇರುವೆಗಳಂತೆ ಖದೀಮರು ಹಾಜರ್.

ಶಿವಮೊಗ್ಗ ಗೋಪಾಲಗೌಡ ಬಡಾವಣೆಯಲ್ಲಿ ಕೆಲವು ತಿಂಗಳಿಂದ ಇದು ಸಾಮಾನ್ಯ ವ್ಯಥೆಯಾಗಿದೆ. ಹೊಸ ಶೂ, ಚಪ್ಪಲಿಗಳನ್ನು ಭದ್ರ ಮಾಡಿಟ್ಟುಕೊಳ್ಳುವುದು ಬಡಾವಣೆ ನಿವಾಸಿಗಳಿಗೆ ದೊಡ್ಡ ತಲೆನೋವಾಗಿದೆ.

ಶೂ ಕದಿಯೋ ಗ್ಯಾಂಗ್

ಈ ಬಡಾವಣೆಯಲ್ಲಿ ಕೆಲವು ತಿಂಗಳಿಂದ ಶೂ ಕದಿಯೋ ಗ್ಯಾಂಗ್ ಬಹಳ ಸಕ್ರಿಯವಾಗಿದೆ. ಹೆಚ್ಚುಕಡಿಮೆ ಪ್ರತಿದಿನ ಒಂದಿಲ್ಲೊಂದು ಮನೆಯಲ್ಲಿ ಚಪ್ಪಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ. ಈ ಕಳ್ಳರ ಪ್ರಮುಖ ಟಾರ್ಗೆಟ್ ಹೊಸ ಪಾದರಕ್ಷೆಗಳು. ದುಬಾರಿ ಪದಾರಕ್ಷೆಗಳಾದರಂತೂ, ಮುಗಿದೆ ಹೋಯಿತು. ಕಳ್ಳರು ರಾತ್ರಿ ಮನೆ ಕಾಂಪೌಂಡ್ ಒಳಗೆ ಬರೋದು ಫಿಕ್ಸ್.

ಹೊರಗೆ ಚಪ್ಪಲಿ ಬಿಡಬೇಕು

ಚಪ್ಪಲಿಗಳನ್ನು ಮನೆಯಿಂದ ಹೊರಗೆ ಬಿಡೋದು ವಾಡಿಕೆ ಮತ್ತು ಅಭ್ಯಾಸ. ಅದರಲ್ಲೂ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭ, ಚಪ್ಪಲಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದು ಉಂಟಾ. ಚಪ್ಪಲಿ ಕಳ್ಳರಿಗೆ ಇದು ವರವಾಗಿದೆ. ‘ನಮ್ಮನೆಲಿ ಯಾರೊಬ್ಬರು ಚಪ್ಪಲಿಗಳನ್ನು ಒಳಗೆ ಹಾಕಿಕೊಂಡು ಬರುವಂತಿಲ್ಲ. ಹೊರಗೆ ಬಿಡಬೇಕು. ಚಪ್ಪಲಿ ಇಡಲು ಹೊರಗೆ ಕಬೋರ್ಡ್‍ಗಳಿವೆ. ಆದರೆ ಕಳ್ಳರ ಕಾಟದಿಂದ ಸಾವಿರಾರು ರುಪಾಯಿ ಚಪ್ಪಲಿ ಕಳೆದುಕೊಂಡಿದ್ದೇವೆ’ ಅನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಗೃಹಿಣಿ.

ಹೇಗೆ ನಡೆಯುತ್ತೆ ಖದೀಮರ ಕಾರ್ಯಾಚರಣೆ?

ಚಪ್ಪಲಿ ಕಳ್ಳತನ ಮಾಡುವ ಗ್ಯಾಂಗ್ ನಡುರಾತ್ರಿಯ ನಂತರ ಹಾಜರಾಗುತ್ತೆ. ಮನೆಗಳನ್ನು ಆಯ್ಕೆ ಮಾಡಿಕೊಂಡು ಒಳಗೆ ನುಗ್ಗುತ್ತಾರೆ. ದುಬಾರಿ ಮತ್ತು ಚನ್ನಾಗಿರುವ ಚಪ್ಪಲಿ, ಶೂಗಳನ್ನು ಚೀಲಕ್ಕೆ ತುಂಬಿಕೊಂಡು ಬೈಕ್‍ಗಳಲ್ಲಿ ಎಸ್ಕೇಪ್ ಆಗುತ್ತಿದ್ದಾರೆ. ಒಬ್ಬರು, ಇಬ್ಬರು ಅಥವಾ ಮೂರ್ನಾಲ್ಕು ಮಂದಿ ಈ ಗ್ಯಾಂಗ್‍ನಲ್ಲಿರುವ ಶಂಕೆ ಇದೆ. ಈ ಖದೀಮರ ಕರಾಮತ್ತುಗಳು ಸಿಸಿಟಿವಿಗಳಲ್ಲಿ ಸೆರೆಯಾಗಿದೆ.

ಚಪ್ಪಲಿಗೆಲ್ಲ ಕಂಪ್ಲೇಂಟ್ ಕೊಡೊದ್ಯಾರು?

ಗೋಪಾಲಗೌಡ ಬಡಾವಣೆಯಲ್ಲಿ ಚಪ್ಪಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ದೂರು ನೀಡಲು ಮುಂದಾದವರು ಬಹಳ ವಿರಳ. ಚಪ್ಪಲಿ ಕಳ್ಳತನಕ್ಕೆಲ್ಲ ದೂರು ಕೊಡೋದಾ ಅಂತಾ ಯೋಚಿಸುತ್ತಾರೆ. ಇದೆ ಕಳ್ಳರ ಪಾಲಿಗೆ ವರವಾಗಿರೋದು. ಸಾವಿರಾರು ರುಪಾಯಿ ಮೌಲ್ಯದ ಚಪ್ಪಲಿಗಳ ಕಳ್ಳತನ ಮಾಡಲಾಗುತ್ತಿದೆ. ಎರಡು ದಿನದ ಹಿಂದೆ ಗೋಪಾಲಗೌಡ ಬಡಾವಣೆಯ E ಬ್ಲಾಕ್‍ನ ನಿವಾಸಿಯೊಬ್ಬರು ದೂರು ನೀಡಿದ್ದಾರೆ.

ಪೊಲೀಸರಿಗೆ ವಿಚಾರ ಗೊತ್ತಿಲ್ಲವಾ?

ಗೋಪಾಲಗೌಡ ಬಡಾವಣೆಯು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಚಪ್ಪಲಿ ಕಳ್ಳತನ ಪ್ರಕರಣಗಳ ಕುರಿತು ಪೊಲೀಸರಿಗೂ ಮಾಹಿತಿ ಇದೆ. ಆದರೆ ಈ ಖದೀಮದರು ಪೊಲೀಸರು ಗೋಪಾಲಗೌಡ ಬಡಾವಣೆಯಲ್ಲಿ ರೌಂಡ್ಸ್ ಬರುವ ಸಮಯ ಹೊರತು ಬೇರೆ ಟೈಮಿನಲ್ಲಿ ಕಳ್ಳತನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಪೊಲೀಸರ ರೌಂಡ್ಸ್ ಮುಖ್ಯ ರಸ್ತೆಗಳಿಗಷ್ಟೇ ಸೀಮಿತವಾಗಿದೆ ಎಂದು ಗೋಪಾಲಗೌಡ ಬಡಾವಣೆ ನಿವಾಸಿಗಳು ಆರೋಪಿಸುತ್ತಾರೆ.

ಪ್ರತಿಷ್ಠಿತ ಏರಿಯಾದಲ್ಲಿ ಸಾಲು ಸಾಲು ಸಮಸ್ಯೆ

ಗೋಪಾಲಗೌಡ ಬಡಾವಣೆ ಪ್ರತಿಷ್ಠತ ಏರಿಯಾ. ಆದರೆ ಇಲ್ಲಿ ಸಮಸ್ಯೆಗಳದ್ದು ದೊಡ್ಡ ಪಟ್ಟಿಯಿದೆ. ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಇಲ್ಲಿನ ನಿವಾಸಿಗಳ ಸಂಘದ ಕಾರ್ಯದರ್ಶಿ ಜಿ.ಡಿ.ಮಂಜುನಾಥ್, ‘ಗೋಪಾಲಗೌಡ ಬಡಾವಣೆಯ ಬಹುಭಾಗದಲ್ಲಿ ಬೀದಿ ದೀಪಗಳಿಲ್ಲ. ಸಂಜೆ ವೇಳೆ ಮನೆಯಿಂದ ಹೊರ ಬರಲು ಜನ ಹೆದರುವಂತಾಗಿದೆ. ಇನ್ನು ಖಾಲಿ ಸೈಟ್‍ಗಳಲ್ಲಿ ಗಿಡಗಳು ದೊಡ್ಡದಾಗಿ ಬೆಳೆದಿವೆ. ಯಾರು ಬಂದರು ಹೋದರು ಗೊತ್ತಾಗುವುದಿಲ್ಲ. ಇಲ್ಲಿನ ಪಾರ್ಕುಗಳಲ್ಲಿ ಸಂಜೆ ವೇಳೆ ಹೊರಗಿನವರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಬೀಟ್‍ ಬಹಳ ಕಡಿಮೆಯಾಗಿದೆ. ಹಾಗಾಗಿ ಕಳ್ಳತನ ಮಾಡುವವರಿಗೆ ಪೊಲೀಸರ ಭಯವಿಲ್ಲ. ಪ್ರಮುಖ ಕಡೆ ಸಿಸಿಟಿವಿಗಳಿವೆ ಆದರೆ ಅವುಗಳು ಕೆಲಸ ಮಾಡುತ್ತಿರುವುದೆ ಅನುಮಾನ’ ಅನ್ನುತ್ತಾರೆ.

ಚಪ್ಪಲಿ ಕಳ್ಳರಿಂದ ಇಡೀ ಗೋಪಾಲಗೌಡ ಬಡಾವಣೆ ಹೈರಾಣಾಗಿದೆ. ಆದಷ್ಟು ಬೇಗ ಇವರ ಹೆಡೆಮುರಿ ಕಟ್ಟುವಂತೆ ಜನರು ಮನವಿ ಮಾಡುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat