ಕಾಂಗ್ರೆಸ್ ಪಕ್ಷವನ್ನು ಟೀಕಿಸದಿದ್ದರೆ ತಿಂದ ಅನ್ನ ಕರಗುವುದಿಲ್ಲ, ಸಚಿವ, ಸಂಸದರಿಗೆ ಮಾಜಿ ಎಂಎಲ್ಎ ತಿರುಗೇಟು

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಅಕ್ಟೋಬರ್ 2020

ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸದಿದ್ದರೆ ತಿಂದ ಅನ್ನ ಕರಗುವುದಿಲ್ಲ.ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬದಲು ಯಾವುದೇ ಚರ್ಚೆ ಮಾಡದೆ ಕೃಷಿ ಮಸೂದೆ ಜಾರಿ ಮಾಡಿರುವ ಬಗ್ಗೆ ಪುನರ್ ಮನನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ರೈತರನ್ನು ದಿಕ್ಕುತಪ್ಪಿಸುತ್ತಿದೆ ಅಂತಾ ಇತ್ತೀಚೆಗೆ ಸಂಸದ ಬಿ.ವೈ.ರಾಘವೇಂದ್ರ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆ.ಬಿ ಪ್ರಸನ್ನಕುಮಾರ್, ಕೃಷಿ ಮಸೂದೆ ರೈತ ಪರವಾಗಿದೆ ಎನ್ನುವ ಸಂಸದರು ಮತ್ತು ಸಚಿವರು, ತಮ್ಮದೆ ಪಕ್ಷದ ಅಂಗವಾದ ಭಾರತೀಯ ಕಿಸಾನ್ ಮಂಚ್ ಏಕೆ ಪ್ರತಿಭಟಿಸುತ್ತಿದೆ. ಅಲ್ಲದೇ ಕೇಂದ್ರ ಮಂತ್ರಿ ಪದವಿ ತ್ಯಜಿಸಿ ಶಿರೋಮಣಿ ಅಕಾಲಿದಳ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಪ್ರಶ್ನಿಸಿದರು.

ರೈತ ವಿರೋಧಿ ಕಾಯ್ದೆಗಳ ಜಾರಿ ವಿರೋಧಿಸಿ ದೇಶಾದ್ಯಂತ ರೈತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು ಈ ಕಾಯ್ದೆಯನ್ನು ಪುನರ್ ವಿಮರ್ಶಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಸರ್ಕಾರ ಸುಗ್ರಿವಾಜ್ಞೆ ಮೂಲಕ ಕೃಷಿ ಮಸೂದೆಯನ್ನು ಜಾರಿಗೊಳಿಸಲು ಹೊರಟಿದೆ. ಇದು ರೈತ ವರ್ಗದ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ, ರಿಯಲ್ ಎಸ್ಟೇಟ್ ವ್ಯಾಪಾರಿಗಳ ಹಿತರಕ್ಷಣೆಗಾಗಿ ಈ ಕಾಯ್ದೆ ತಿದ್ದುಪಡಿ ಮಾಡಿದೆ ಎಂದು ಟೀಕಿಸಿದರು.
ರೈತರು ಯಾವುದೇ ಕಾರಣಕ್ಕೂ ಈ ಕಾಯ್ದೆಗಳನ್ನು ಒಪ್ಪಬಾರದು. ಎಪಿಎಂಸಿ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಳಸಿಕೊಂಡು ಮೋದಿ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನೇ ಹಾಳು ಮಾಡಿ ರೈತರನ್ನು ಗುಲಾಮಗಿರಿಗೆ ದೂಡುವ ಈ ಕಾಯ್ದೆ ತಂದಿದ್ದಾರೆ ಇದನ್ನು ಹೇಗೆ ಒಪ್ಪಲು ಸಾಧ್ಯ ಎಂದರು.

ಮುಖಂಡರಾದ ಎನ್.ರಮೇಶ್, ಅನಿತಾ ಕುಮಾರಿ, ಹೆಚ್.ಸಿ.ಯೋಗೀಶ್, ಆರ್.ಸಿ.ನಾಯ್ಕ, ಕೆ.ರಂಗನಾಥ್, ರಂಗೇಗೌಡ, ಚಾಮರಾಜ್, ಶ್ಯಾಮ ಸುಂದರ್ ಇನ್ನಿತರರು ಸುದ್ದಿಗೊಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat