ಮೊಬೈಲ್ ರೀಚಾರ್ಜ್ ಮಾಡ್ತೀವಿ ಅಂತಾ ಕೋಟಿ ಕೋಟಿ ಟೋಪಿಯ ಆರೋಪ, ಏನಿದು? ವಂಚನೆ ಆಗಿದ್ದು ಹೇಗೆ?

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020

ಸೇವ್ ರೀಚಾರ್ಜ್ ಹೆಸರಿನ ವೆಬ್‍ಸೈಟ್ ಒಂದು ಗ್ರಾಹಕರಿಗೆ ಟೋಪಿ ಹಾಕಿದೆ. ಲಕ್ಷಾಂತರ ಜನರು ಕೋಟ್ಯಂತರ ರುಪಾಯಿ ಕಳೆದುಕೊಂಡಿದ್ದಾರೆ. ತಮ್ಮ ಹಣ ವಾಪಸ್ ಕೊಡಿಸುವಂತೆ ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ.

ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಜಾಹೀರಾತು ನಂಬಿ ಹಲವರು ಹಣ ಹೂಡಿಕೆ ಮಾಡಿದ್ದರು. 1250 ರೂ.ಗೆ ಒಂದು ವರ್ಷಕ್ಕೆ ಮೊಬೈಲ್‍ ರೀಚಾರ್ಜ್ ಮಾಡಿಕೊಳ್ಳಬಹುದು ಎಂದು ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು. ಇದನ್ನು ನಂಬಿ ಹಲವರು ರೀಚಾರ್ಜ್ ಮಾಡಿದ್ದರು.

VIDEO REPORT

ರೀಚಾರ್ಜ್ ಹೇಗೆ?

1250 ರೂ. ಪಾವತಿಸಿದರೆ ಆನ್‍ಲೈನ್ ಮೂಲಕ ಒಂದು ವರ್ಷಕ್ಕೆ ಮೊಬೈಲ್ ರೀಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಬಿಎಸ್‍ಎನ್ಎಲ್ ಹೊರತು ಉಳಿದೆಲ್ಲ ಮೊಬೈಲ್ ಸಿಮ್‍ಗಳಿಗೆ ರೀಚಾರ್ಜ್ ಮಾಡಲಾಗುತ್ತಿತ್ತು. ರೀಚಾರ್ಜ್ ಮಾಡಿದವರಿಗೆ ಒಂದೇ ಬಾರಿಗೆ ವಾರ್ಷಿಕ ರೀಚಾರ್ಜ್ ಮಾಡುತ್ತಿರಲಿಲ್ಲ. ಪ್ರತಿ ತಿಂಗಳು ಸ್ವಲ್ಪ ಪ್ರಮಾಣದ ಹಣಕ್ಕೆ ರೀಚಾರ್ಜ್ ಮಾಡಲಾಗುತ್ತಿತ್ತು ಎಂದು ಗ್ರಾಹಕರು ಆರೋಪಿಸಿದ್ದಾರೆ.

ಕೆಲವು ತಿಂಗಳು ಮೊಬೈಲ್ ರೀಚಾರ್ಜ್ ಮಾಡಿದ ಸೇವ್ ರೀಚಾರ್ಜ್ ಸಂಸ್ಥೆ, ಈಗ ಮೊಬೈಲ್ ರೀಚಾರ್ಜ್ ನಿಲ್ಲಿಸಿದೆ. ಪ್ರಶ್ನಿಸಿದಾಗ ಹಾರಿಕೆ ಉತ್ತರ ನೀಡಿದ್ದಾರೆ. ವೆಬ್‍ಸೈಟ್ ಕೂಡ ಬಂದ್ ಆಗಿದೆ. ಇದರಿಂದ ಗಾಬರಿಯಾದ ಗ್ರಾಹಕರು ಹಣ ಹಿಂತಿರುಗಿಸುವಂತೆ ಆಗ್ರಹಿಸಿದ್ದಾರೆ.

ಚೈನ್ ಲಿಂಕ್ ದಂಧೆ

ಸೇವ್ ರೀಚಾರ್ಜ್ ಎಂಬುದು ಚೈನ್ ಲಿಂಕ್ ದಂಧೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಒಬ್ಬರು ಮತ್ತೊಬ್ಬರನ್ನು ಬಿಸ್ನೆಸ್‍ಗೆ ಸೇರಿಸುತ್ತ ಲಾಭ ಮಾಡಿಕೊಳ್ಳುವ ದಂಧೆಯಾಗಿತ್ತು. ಒಂದು ರೀಚಾರ್ಜ್ ಮಾಡಿದರೆ 65 ರೂ. ಲಾಭವಾಗುತ್ತಿತ್ತು. ಹಾಗಾಗಿ ಹೆಚ್ಚು ರೀಚಾರ್ಜ್ ಮಾಡಿಸುವವರಿಗೆ ಅಧಿಕ ಲಾಭವಾಗುತ್ತಿತ್ತು. ಇದೆ ಕಾರಣಕ್ಕೆ ಹಲವರು ನೂರಾರು ಮಂದಿಯ ರೀಚಾರ್ಜ್ ಮಾಡಿಸಿ, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಣ ಕಳೆದುಕೊಂಡು ಗ್ರಾಹಕರು ಕಂಗಾಲಾಗಿದ್ದಾರೆ. ರೀಚಾರ್ಜ್ ಮಾಡಿಸಿದವರು ಅಡಕತ್ತರಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕದ ತಟ್ಟಿದ ಗ್ರಾಹಕರು, ಹಣ ಹಿಂತಿರುಗಿಸಿಕೊಡುವಂತೆ ಮನವಿ ಮಾಡಿದರು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat