32 ಲಕ್ಷದಲ್ಲಿ ಅಡಿಕೆ ಬಗ್ಗೆ ನಡೆಯಲಿದೆ ಮಹತ್ವದ ಸಂಶೋಧನೆ, ಏನಿದು ಸಂಶೋಧನೆ? ಯಾಕಾಗಿ ನಡೆಯಲಿದೆ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಅಕ್ಟೋಬರ್ 2020

ಅಡಿಕೆಯ ಔಷಧಿಯ ಗುಣಗಳ ಕುರಿತು ವೈಜ್ಞಾನಿಕವಾಗಿ ಸಂಶೋಧನೆ ಮಾಡಿ, ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲಾಗುತ್ತದೆ. ಇದಕ್ಕಾಗಿ 32 ಲಕ್ಷ ವೆಚ್ಚದಲ್ಲಿ ಸಂಶೋಧನೆ ನಡೆಯುತ್ತಿದೆ ಎಂದು ಶಾಸಕ, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಅಡಿಕೆ ಹಾನಿಕಾರಕ ಎಂಬ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಡಿಕೆಯನ್ನು ಪಾರಂಪರಿಕವಾಗಿ ಬಳಕೆ ಮಾಡಲಾಗುತ್ತಿದೆ. ಇದರ ಔಷಧಿಯ ಗುಣಗಳ ಕುರಿತು ಸಂಶೋಧನೆಗೆ ರಾಮಯ್ಯ ಹೆಲ್ತ್ ಯುನಿವರ್ಸಿಟಿಯಲ್ಲಿ ಸಂಶೋಧನೆ ನಡೆಯುತ್ತಿದೆ ಎಂದರು.

ಅಡಿಕೆ ಟಾಸ್ಕ್ ಫೋರ್ಸ್ ವತಿಯಿಂದ ಸಂಶೋಧನೆಗೆ 32 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಸಂಶೋಧನೆಗೆ ಒಂದೂವರೆ ವರ್ಷ ಗಡುವು ನೀಡಲಾಗಿದೆ. ಈ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಅಡಿಕೆಯ ಔಷಧಿಯ ಗುಣಗಳನ್ನು ಮನವರಿಕೆ ಮಾಡಲಾಗುತ್ತದೆ ಎಂದು ಆರಗ ಜ್ಞಾನೇಂದ್ರೆ ತಿಳಿಸಿದರು.

ಟಾಸ್ಕ್ ಫೋರ್ಸ್‌ಗೆ ಎರಡು ಕೋಟಿ

ಸುಪ್ರೀಂ ಕೋರ್ಟ್‌‌ನಲ್ಲಿ ವಾದ ಮಂಡಿಸಲು ಮತ್ತು ಅಡಿಕೆ ಕುರಿತ ಸಂಶೋಧನೆಗೆ ಎರಡು ಕೋಟಿ ರೂ. ಅಗತ್ಯವಿದೆ. ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

ಅಡಿಕೆ ಉಪ ಉತ್ಪನ್ನಗಳ ನಿಷೇಧವಿಲ್ಲ

ಅಡಿಕೆ ನಿಷೇಧ ಕುರಿತು ವದಂತಿ ಹಬ್ಬಿದೆ. ಪ್ರತಿ ವರ್ಷ ಅಡಿಕೆ ಕೊಯ್ಲು ಬಂದಾಗ ನಿಷೇಧದ ವದಂತಿ ಹಬ್ಬಿಸಲಾಗುತ್ತದೆ. ಈ ಬಾರಿಯೂ ಅದೆ ರೀತಿ ಹಬ್ಬಿದೆ. ಶಾಸಕರಾದ ಹರತಾಳು ಹಾಲಪ್ಪ ಮತ್ತು ರೇಣುಕಾಚಾರ್ಯ, ಅಡಿಕೆ ಟಾಸ್ಕ್ ಫೋರ್ಸ್ ಸದಸ್ಯರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿಚಾರ ತಿಳಿಸಿದ್ದೇವೆ. ಅಡಿಕೆ ನಿಷೇಧ ಮಾಡುವುದಿಲ್ಲ ಎಂದು ಬೆಳೆಗಾರರಿಗೆ ಅಭಯ ನೀಡಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat