ಬಿಹಾರದಿಂದ ಮನೆ ಬಿಟ್ಟು ಸಾಗರಕ್ಕೆ ಬಂದ ಯುವಕ, ಮತ್ತೆ ಪೋಷಕರನ್ನು ಸೇರಲು ನೆರವಾದ ಕರ್ಕಿಕೊಪ್ಪ ಆಟೋ ಚಾಲಕ

ಶಿವಮೊಗ್ಗ ಲೈವ್.ಕಾಂ |SAGARA / SHIMOGA NEWS | 21 NOVEMBER 2020

ಜಾರ್ಖಂಡ್ ರಾಜ್ಯದ ರಾಂಚಿಯಿಂದ ಮನೆ ಬಿಟ್ಟು ಬಂದು ಸಾಗರದ ಸುತ್ತಮುತ್ತ ಅಲೆದಾಡುತ್ತಿದ್ದ ಯುವಕ ಪುನಃ ಕುಟುಂಬ ಸೇರಿದ್ದಾನೆ. ಒಂದು ತಿಂಗಳ ಬಳಿಕ ಯುವಕ ಮನೆಯವರನ್ನು ಸೇರಲು ನೆರವಾದ ಸಾಗರದ ಆಟೋ ಚಾಲಕನಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಶಂಸೆ ಪತ್ರ ನೀಡಿದೆ.

ಬಿಹಾರದಿಂದ ಬಂದಿದ್ದ ಯುವಕ

ಶಾಶ್ವತ್ ಕುಮಾರ್ (24) ಎಂಬಾತ ಬಿಹಾರದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದ. ಅಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ. ಹೇಗೋ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ತಲುಪಿದ್ದ. ಜೋಗ ಸುತ್ತಮುತ್ತ ಓಡಾಡಿಕೊಂಡಿದ್ದ. ಈತನ ಚಲನವಲನ ಗಮನಿಸಿದ ಆಟೋ ಚಾಲಕ ಕರ್ಕಿಕೊಪ್ಪದ ಶೇಖರ ಪೂಜಾರಿ, ಯುವಕನನ್ನು ವಿಚಾರಿಸಿದ್ದರು. ಆತ ಮನೆ ಬಿಟ್ಟು ಬಂದಿರುವುದು ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಜಾರ್ಖಂಡ್‍ನಿಂದ ಐಪಿಎಸ್‍ ಅಧಿಕಾರಿ ಫೋನ್

ಯುವಕ ಸಾಗರದಲ್ಲಿ ಓಡಾಡಿಕೊಂಡು ಇರುವ ಮಾಹಿತಿ ತಿಳಿದ ಜಾರ್ಖಂಡ್ ಐಜಿಪಿ, ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರು, ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜೋಗ ಠಾಣೆ ಪೊಲಿಸರು ಶಾಶ್ವತ್ ಕುಮರ್‍ನನ್ನ ಪತ್ತೆ ಮಾಡಿದ್ದಾರೆ.

ಶಿವಮೊಗ್ಗಕ್ಕೆ ಬಂದ ಪೋಷಕರು

ಶಾಶ್ವತ್ ಕುಮಾರ್‍ ಪತ್ತೆ ಆಗಿರುವ ಮಾಹಿತಿ ತಿಳಿದ ಪೋಷಕರು ಶಿವಮೊಗ್ಗಕ್ಕೆ ಬಂದಿದ್ದರು. ಪೊಲೀಸರು ಆತನನ್ನ ಪೋಷಕರಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನೆರವಾದ ಆಟೋ ಚಾಲಕ ಶೇಖರ್ ಪೂಜಾರಿಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಶೇಖರ್ ಪೂಜಾರಿ ಅವರಿಗೆ ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ನೀಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!