‘ಸಾಗರದ ಕ್ಷೇತ್ರದ ಜನರಿಗೆ ಸಂಸದರು ದ್ರೋಹ ಬಗೆದಿದ್ದಾರೆ, ಒತ್ತಡ ಹೇರುವಲ್ಲಿ ಶಾಸಕರು ವಿಫಲವಾಗಿದ್ದಾರೆ’

ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020

ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ನಿರ್ಮಿಸುತ್ತೇವೆ ಎಂದು ಈವರೆಗೂ ಜನರಿಗೆ ಭರವಸೆ ನೀಡಿ, ಈಗ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಈ ಮೂಲಕ ಸಾಗರ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್, ಕೋಟೆಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಆರು ಕೋಟಿ ರೂ. ಹಣ ಮಂಜೂರಾಗಿದೆ. ಈಗಾಗಲೆ ಜಾಗ ಸಮತಟ್ಟು ಮಾಡುವ ಕೆಲಸವು ನಡೆಯುತ್ತಿದೆ ಎಂದರು.

ಸಂಸದರದ್ದು ಎರಡು ನಾಲಗೆನಾ?

ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಸೂಕ್ತ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ಅಗರ್‍ವಾಲ್ ಅವರು ವರದಿ ನೀಡಿದ್ದರು. ಈ ಸಂಬಂಧ ಸಮಗ್ರ ಯೋಜನಾ ವರದಿ ತಯಾರಿಸುವಂತೆ ಸೂಚಿಸಿದ್ದರು. ಸಂಸದ ರಾಘವೇಂದ್ರ ಅವರು ತಾಳಗುಪ್ಪದಲ್ಲೇ ಟರ್ಮಿನಲ್ ಸ್ಥಾಪಿಸುವ ಭರವಸೆ ನೀಡಿದ್ದರು. ಈಗ ಏಕಾಏಕಿ ಕೋಟೆ ಗಂಗೂರಿನಲ್ಲಿ ಟರ್ಮಿನಲ್ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ. ಸಂಸದ ರಾಘವೇಂದ್ರ ಅವರದ್ದೇನು ಎರಡು ನಾಲಗೆನಾ ಎಂದು ತೀ.ನಾ.ಶ್ರೀನಿವಾಸ್ ಪ್ರಶ್ನಿಸಿದರು.

ಒತ್ತಡ ಹೇರಲು ವಿಫಲರಾದ ಶಾಸಕರು

ತಾಳಗುಪ್ಪದಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪನೆ ಆಗಿದ್ದರೆ ಈ ಭಾಗದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತಿತ್ತು. ಈಗದು ಕೈ ತಪ್ಪಿ ಹೋಗಿದೆ. ಟರ್ಮಿನಲ್ ಸ್ಥಾಪನೆ ಸಂಬಂಧ ಶಾಸಕರಾದ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಸಂಸದರ ಮೇಲೆ ಒತ್ತಡ ಹೇರಲು ವಿಫಲವಾಗಿದ್ದಾರೆ. ತಾಳಗುಪ್ಪದ ಬದಲು ಕೋಟೆಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಕಾರಣವೇನು ಎಂದು ಸಂಸದರು ಸಾಗರ ಕ್ಷೇತ್ರದ ಜನರಿಗೆ ತಿಳಿಸಬೇಕು ಎಂದು ತೀ.ನಾ.ಶ್ರೀನಿವಾಸ್ ಆಗ್ರಹಿಸಿದರು.

ನಗರಸಭೆ ಸದಸ್ಯರಾದ ಲಲಿತಮ್ಮ, ಸೈಯದ್ ಜಾಕೀರ್, ಪ್ರಮುಖರಾದ ಸುಭಾಷ್, ಪುಟ್ಟಪ್ಪ, ಮನೋಹರ್, ಗೋಪಾಲ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

(LEAD PHOTO IS A FILE)

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!