ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021
ಗಾಂಜಾ ಹಾವಳಿಯಿಂದ ಶಿವಮೊಗ್ಗ ಜನ ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಹೋರಾಟಗಳು, ಆಗ್ರಹಗಳು ನಿರಂತರವಾಗಿವೆ. ಈ ಮಧ್ಯೆ ಗಾಂಜಾ ದಂಧೆಗೆ ಬ್ರೇಕ್ ಹಾಕಲು ಹೊಸ ಮಾದರಿಯ ತಂತ್ರ ಅಳವಡಿಸಿಕೊಂಡಿದ್ದಾರೆ. ದಂಧೆಕೋರರನ್ನು ನಿಗ್ರಹ ಮಾಡುವುದರ ಜೊತೆಗೆ ಬಳಕೆದಾರರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗಂಜಾ ದಂಧೆಗೆ ಕಡಿವಾಣ ಇಲ್ಲವಾಗಿದೆ. ಹಳ್ಳಿ ಹಳ್ಳಿಯಲ್ಲೂ ಗಾಂಜಾ ಮಾರಾಟವಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ. ಇದರ ಅಮಲಿನಲ್ಲಿ ನಡೆದ ಅಪರಾಧ ಚಟುವಟಿಕೆಗಳು ಒಂದೆರಡಲ್ಲ. ಗಾಂಜಾ ನಶೆಯಲ್ಲಿ ಹಲವು ಭಾರಿ ಪೊಲೀಸರ ಮೇಲೂ ಹಲ್ಲೆಯಾದ ಉದಹಾರಣೆಗಳಿವೆ.
ಮಾರಾಟಗಾರರ ಜೊತೆ ಬಳಕೆದಾರರತ್ತ ಕೆಂಗಣ್ಣು
ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕುವುದಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದರು. ಕೆಲವೊಮ್ಮೆ ಕೆ.ಜಿಗಟ್ಟಲೆ ಗಾಂಜಾ ವಶಪಡಿಸಿಕೊಳ್ಳುತ್ತಿದ್ದರು. ಬಹುತೇಕ ಸಂದರ್ಭ ಗ್ರಾಂ ಲೆಕ್ಕದಲ್ಲಿ ಗಾಂಜಾ ಪತ್ತೆಯಾಗುತಿತ್ತು. ಆರೋಪಿಗಳನ್ನು ಬಂಧಿಸಿದರೂ, ಜಾಮೀನಿನ ಮೇಲೆ ಹೊರ ಬಂದು, ಹಳೆ ದಂಧೆ ಶುರು ಮಾಡುತ್ತಿದ್ದರು. ಹಾಗಾಗಿ ಎಷ್ಟೆ ದಾಳಿಗಳಾದರೂ ಗಾಂಜಾ ಮಾರಾಟ ನಿಂತಿರಲಿಲ್ಲ. ಇದೆ ಕಾರಣಕ್ಕೆ ಈಗ ಮಾರಾಟಗಾರರ ಜೊತೆಗೆ ಗಾಂಜಾ ಅಮಲೇರಿಸಿಕೊಳ್ಳುವವರನ್ನು ಪೊಲೀಸರು ಟಾರ್ಗೆಟ್ ಮಾಡಿದ್ದಾರೆ.
ಬಳಕೆದಾರರ ಮೇಲೆ ಪೊಲೀಸರ ನಿಗಾ
ಪೊಲೀಸರು ಮಾರಾಟಗಾರರಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಬಳೆಕೆದಾರರಿಗೂ ಶಾಕ್ ಕೊಡಲು ಶುರು ಮಾಡಿದ್ದಾರೆ. ಟಿಪ್ಪು ನಗರ, ಗೋಪಾಳ ಸೇರಿದಂತೆ ವಿವಿಧೆಡೆ ಅಮಲಿನಲ್ಲಿ ಓಡಾಡುತ್ತಿದ್ದವರನ್ನು ಗುರುತಿಸಿ ಹಿಡಿದು ತಂದು ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಗಾಂಜಾ ಸೇವನೆ ಮಾಡಿರುವುದು ಗೊತ್ತಾಗಿದೆ. ಸುಮಾರು ಹತ್ತು ಮಂದಿ ವಿರುದ್ಧ ಈಗಾಗಲೇ ಪ್ರಕರಣ ದಾಖಲು ಮಾಡಿದ್ದಾರೆ. ಇದು ಗಾಂಜಾ ಬಳಕೆದಾರರಿಗೆ ಭಯ ಹುಟ್ಟಿಸಿದೆ.
ಮೆಗ್ಗಾನ್ ಆಸ್ಪತ್ರೆಗೆ ಬಂದು ಟೆಸ್ಟಿಂಗ್ ಕಿಟ್
ಗಾಂಜಾ ಬಳಕೆದಾರರು ಈವರೆಗೂ ಅಮಲಿನಲ್ಲಿ ಓಡಾಡಿಕೊಂಡಿದ್ದರು. ಇವರಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಟೆಸ್ಟಿಂಗ್ ಕಿಟ್ ತರಿಸಲಾಗಿದೆ. ‘ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ಟೆಸ್ಟಿಂಗ್ ಕಿಟ್ ತರಿಸಲಾಗಿದೆ. ಗಾಂಜಾ ಸೇವನೆ ಮಾಡಿದ್ದಾರೋ ಇಲ್ಲವೋ ಅನ್ನುವುದನ್ನು ಈ ಕಿಟ್ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಲಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಹೇಗೆ ನಡೆಯುತ್ತೆ ಅಮಲಿನಲ್ಲಿರುವವರ ಟೆಸ್ಟ್?
ಗಾಂಜಾ ಅಮಲಿನಲ್ಲಿರುವವರನ್ನು ಗುರುತಿಸುವುದು ಪೊಲೀಸರಿಗೆ ಕಷ್ಟವೇನಲ್ಲ. ಆದರೆ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಲು ಪರೀಕ್ಷೆ ನಡೆಸಬೇಕಾಗುತ್ತದೆ. ಇದೆ ಕಾರಣಕ್ಕೆ ಶಿವಮೊಗ್ಗಕ್ಕೆ ಪರೀಕ್ಷಾ ಕಿಟ್ ತರಿಸಲಾಗಿದೆ. ‘ಡ್ರಗ್ಸ್ ಟೆಸ್ಟಿಂಗ್ ಕಿಟ್ ಅಂತಾ ಇದೆ. ಅದರಲ್ಲಿ ಬೇರೆ ಬೇರೆ ಮಾದಕ ವಸ್ತುಗಳ ಪರೀಕ್ಷೆ ನಡೆಸಬಹುದು. ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ರಿಕ್ವೆಸ್ಟ್ ಮಾಡಿ, ಶಿವಮೊಗ್ಗಕ್ಕೆ ಗಾಂಜಾ ಟೆಸ್ಟಿಂಗ್ ಕಿಟ್ ತರಿಸಿದ್ದೇವೆ. ಗಾಂಜಾ ಸೇವನೆ ಮಾಡಿದವರ ಮೂತ್ರವನ್ನು ಉಪಯೋಗಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರಲ್ಲಿ ಪಾಸಿಟಿವ್ ಬಂದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಊರು ಬಿಟ್ಟರು ಮಾರಾಟಗಾರರು
ಗಾಂಜಾ ವಿಚಾರದಲ್ಲಿ ಪೊಲೀಸರ ಕಾರ್ಯಾಚರಣೆ ಸ್ವರೂಪ ಬದಲಾಗಿದೆ. ಬಳಕೆದಾರರನ್ನು ನಿಗ್ರಹಿಸಿದರೆ ಮಾರಾಟಗಾರರನ್ನು ಮಟ್ಟ ಹಾಕುವುದು ಸುಲಭ ಅನ್ನುವುದು ಪೊಲೀಸರ ಲೆಕ್ಕಾಚಾರವಾಗಿದೆ. ಇದೆ ಕಾರಣಕ್ಕೆ ಗಾಂಜಾ ಸೇವನೆ ಮಾಡಿದವರನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿ, ಪಾಸಿಟಿವ್ ಬಂದರೆ ಎನ್ ಡಿಪಿಎಸ್ ಕಾಯ್ದೆಯ ಸೆಕ್ಷನ್ 27(ಬಿ) ಅಡಿ ಪ್ರಕರಣ ದಾಖಲು ಮಾಡುತ್ತಿದ್ದಾರೆ.
ಈ ಕಾಯ್ದೆ ಅನ್ವಯ ಆರೋಪಿಗೆ ಆರು ತಿಂಗಳು ಜೈಲು ಶಿಕ್ಷೆ ಮತ್ತ ಹತ್ತು ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಪೊಲೀಸರ ಕ್ರಮ ಗಾಂಜಾ ದಂಧೆಕೋರರಿಗೆ ಬಿಸಿ ತುಪ್ಪವಾಗಿದೆ. ‘ಈಗಾಗಲೇ ನಾಲ್ವರು ಪ್ರಮುಖ ಗಾಂಜಾ ದಂಧೆಕೋರರು ಊರು ಬಿಟ್ಟಿದ್ದಾರೆ. ಅವರ ವಿರುದ್ಧವು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಗಾಂಜಾ ದಂಧೆ ವಿರುದ್ಧ ಪೊಲೀಸರ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಆರಂಭ ಶೂರುತ್ವವಾಗದೆ ಶಾಶ್ವತವಾಗಿ ಗಾಂಜಾ ದಂಧೆ ಕಡಿವಾಣಕ್ಕೆ ಯತ್ನಿಸಬೇಕಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು