ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SAFFRON | 10 ಮೇ 2022
ಕೇಸರಿ ಶಾಂತಿಯ ಸಂಕೇತ. ಆದರೆ ಬಿಜೆಪಿಯವರು ಸದಾ ರಕ್ತ ಮತ್ತು ಹಿಂಸೆ ಮೇಲೆ ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ಅವರು ಕೇಸರಿ ಟೋಪಿ ಮತ್ತು ಶಾಲು ಹಾಕುವ ಬದಲು, ಕೆಂಪು ಟೋಪಿ, ಶಾಲು ಧರಿಸಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಲ್ಲಿ ಜನಧ್ವನಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಅಂದಿದ್ದರು. ಈಗ ಕೇಸರಿ ಟೋಪಿ, ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ನಾಯಕರು ತಿರುಗಾಡುತ್ತಿದ್ದಾರೆ. ಬಿಜೆಪಿಗೂ ಕೇಸರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಕೇಸರಿ ಬಣ್ಣದ ದುರುಪಯೋಗ
ಬಿಜೆಪಿ ಶಾಂತಿಯ ಸಂಕೇತ. ಮಠ ಮಾನ್ಯಗಳಲ್ಲಿ ಸ್ವಾಮೀಜಿಗಳು, ಧರ್ಮಗುರುಗಳು ಕೇಸರಿ ವಸ್ತ್ರ ಧರಿಸುತ್ತಾರೆ. ನಾವು ಅವರಿಗೆ ಗೌರವ ನೀಡುತ್ತೇವೆ. ಆದರೆ ಬಿಜೆಪಿಯವರು ಈ ಕೇಸರಿ ಬಣ್ಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೂ ಕೇಸರಿಗೂ ಏನು ಸಂಬಂಧ. ಸ್ವಾತಂತ್ರ್ಯ ಹೋರಾಟದಲ್ಲಿ ಅವರೇನಾದರೂ ತ್ಯಾಗ ಬಲಿದಾನ ಮಾಡಿದ್ದಾರಾ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶದ ಐಕ್ಯತೆಗೆ, ಸಮಗ್ರತೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿ ಮುಖಂಡರು ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಹೂಡಿಕೆದಾರರನ್ನು ಶಿವಮೊಗ್ಗಕ್ಕೆ ಕರೆತನ್ನಿ
ಬಿಜೆಪಿ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಮುಂದಾಗಿದೆ. ಯಡಿಯೂರಪ್ಪ, ಈಶ್ವರಪ್ಪ ಅವರು ಬಂಡವಾಳ ಹೂಡಿಕೆದಾರರನ್ನು ಶಿವಮೊಗ್ಗ ಜಿಲ್ಲೆಗೆ ಕರೆತನ್ನಿ. ಈ ಜಿಲ್ಲೆಯ ಸುಮಾರು 8 ಸಾವಿರ ಜನರಿಗೆ ಉದ್ಯೋಗ ನೀಡಲು ಯಾರಾದರೂ ಧೈರ್ಯವಾಗಿ ಮುಂದೆ ಬರುತ್ತಾರಾ ಎಂಬುದನ್ನು ನೋಡಿ ಎಂದು ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದರು.
ಶಿವಮೊಗ್ಗ ಜಿಲ್ಲೆಗೆ ನೀವು ಇಟ್ಟಿರುವ ಕಪ್ಪುಚುಕ್ಕೆ ಪರಿಣಾಮ ಇಲ್ಲಿ ಉದ್ಯೋಗ ಸೃಷ್ಟಿ ಮಾಡಲು ಯಾವುದೇ ಬಂಡವಾಳ ಹೂಡಿಕೆದಾರರು ಮುಂದೆ ಬರುವುದಿಲ್ಲ. ಕರ್ನಾಟಕ ರಾಜ್ಯ ಬಸವಣ್ಣನವರ ಕರ್ನಾಟಕ, ಕುವೆಂಪು ಅವರ ಕರ್ನಾಟಕ, ಶಿಶುನಾಳ ಶರೀಫರ ಕರ್ನಾಟಕ, ಕನಕದಾಸರ ಕರ್ನಾಟಕ, ವಿಶ್ವ ಕರ್ನಾಟಕವಾಗಿ ಬೆಳೆಯಬೇಕು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ ಎಂದು ತಿಳಿಸಿದರು.
ರಾಜಕೀಯ ನಿವೃತ್ತಿಯ ಸವಾಲು
ಬಿಜೆಪಿ ಆಡಳಿತದಲ್ಲಿ ಸರ್ಕಾರದ ಹುದ್ದೆಗಳಿಗೆ ಒಂದೊಂದಕ್ಕೆ ಒಂದೊಂದು ದರ ನಿಗದಿಯಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್’ಗೆ 50 ಲಕ್ಷ, ಸಬ್ ಇನ್ಸ್ ಪೆಕ್ಟರ್’ಗೆ 25 ಲಕ್ಷ, ಡಿವೈಎಸ್ಪಿ ಗೆ ಒಂದು ಕೋಟಿ, ಎಸ್ಪಿಗೆ 1.50 ಕೋಟಿ ನಿಗದಿಯಾಗಿದೆ. ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ಪಿಎಸ್ಐ ನೇಮಕಾತಿಯಲ್ಲಿ 50 ಲಕ್ಷದಿಂದ ಒಂದು ಕೋಟಿವರೆಗೂ, ಬೇರೆ ಬೇರೆ ಹುದ್ದೆಗಳಿಗೆ 75 ರಿಂದ 80 ಲಕ್ಷ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ, ಹೇಗಿತ್ತು ಮೆರವಣಿಗೆ?
ನಾನು ಕೂಡ ಹಿಂದೆ ಇಂಧನ ಸಚಿವನಾಗಿದ್ದೆ. ಆ ಸಂದರ್ಭ ಮೂವತ್ತು ಸಾವಿರ ಜನರಿಗೆ ಉದ್ಯೋಗ ನೀಡಲಾಗಿತ್ತು. ನಮ್ಮ ಅವಧಿಯಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿಯನ್ನು ಅಕ್ರಮವಾಗಿ ನೇಮಕ ಮಾಡಿದ್ದರೆ ನಾನು ಈಗಲೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದರು.
ಈಶ್ವರಪ್ಪ ಸಂಚು ರೂಪಿಸುತ್ತಿದ್ದಾರೆ
ಹರ್ಷ ಕೊಲೆ ಕುರಿತು ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಈ ಜಿಲ್ಲೆಯ ಯುವಕ ಸಾವನ್ನಪ್ಪಿದ್ದಾನೆ. ತಪ್ಪು ಯಾರು ಮಾಡಿದರೂ ತಪ್ಪೇ. ಆದರೆ ಅದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಮತ್ತೊಂದು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ಅದನ್ನು ತಡೆದು 13 ಮಂದಿಯನ್ನು ಬಂಧಿಸಿ, ಪರಿಸ್ಥಿತಿ ನಿಭಾಯಿಸಿದ್ದಾರೆ. ಈಶ್ವರಪ್ಪನವರು ಎಷ್ಟೆಲ್ಲಾ ಸಂಚು ರೂಪಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಇಷ್ಟೆಲ್ಲಾ ಆಗುತ್ತಿದ್ದರೂ ಯಡಿಯೂರಪ್ಪನವರು ಹಾಗೂ ಬೊಮ್ಮಾಯಿಯವರು ಯಾವ ಕಾರಣಕ್ಕೆ ಈಶ್ವರಪ್ಪನವರ ಬೆಂಬಲಕ್ಕೆ ನಿಂತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದರು.
ಈಶ್ವರಪ್ಪ ಮಹಾ ಸತ್ಯವಂತರು
ಈಶ್ವರಪ್ಪ ಅವರು ಬಹಳ ಸತ್ಯವಂತರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈಶ್ವರಪ್ಪ ಅವರೇ ರಾಜ್ಯಪಾಲರಿಗೆ ಪತ್ರ ಬರೆದು, ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರು ನೀಡುತ್ತಾರೆ. ಆದರೂ ಈಶ್ವರಪ್ಪನವರನ್ನು ತೆಗೆದುಹಾಕಲು ಯಡಿಯೂರಪ್ಪನವರಿಗೆ ತಾಕತ್ತು ಇರಲಿಲ್ಲ ಎಂದರು.
ಈಗ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವಾಗ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಈಶ್ವರಪ್ಪನವರು ಹೇಳುತ್ತಾರೆ. ಈ ರೀತಿ ಈಶ್ವರಪ್ಪನವರು ತಮಗೆ ನೆರವಾದವರಿಗೆ ಬಾಂಬ್ ಹಾಕುವ ಕೆಲಸ ಮಾಡುತ್ತಾರೆ. ಶಿವಮೊಗ್ಗ ಜಿಲ್ಲೆಗೆ ಕೋಮುಗಲಭೆ ಮೂಲಕ ಕಪ್ಪುಚುಕ್ಕೆ ಇಟ್ಟು ಇಡೀ ಜಿಲ್ಲೆಯ ಜನತೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಜನರು ಅವರನ್ನು ಮನೆಗೆ ಕಳುಹಿಸಬೇಕು. ಈ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ, ಇಲ್ಲಿದೆ ಫೋಟೊ ಆಲ್ಬಂ