SHIVAMOGGA LIVE NEWS | 17 JUNE 2024
SHIMOGA : ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ (Protest) ನಡೆಸಲಾಯಿತು. ಬಿಜೆಪಿಯ ವಿವಿಧ ಮೋರ್ಚಾಗಳು ಒಂದೊಂದು ಬಗೆಯಲ್ಲಿ ಪ್ರತಿಭಟನೆ ನಡೆಸಿದವು.
![]() |
ತರಕಾರಿಗಳ ಬೆಲೆ ದುಬಾರಿ ಆಗಿದೆ ಎಂದು ಆರೋಪಿಸಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ಎಲ್ಲ ತರಕಾರಿಗಳನ್ನು ಇರಿಸಿ, ಅವುಗಳ ಬೆಲೆ ನಮೂದು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕುದುರೆ ಏರಿ ಬಂದ ಶಾಸಕ
ಶಿವಪ್ಪನಾಯಕ ಪ್ರತಿಮೆ ಬಳಿಯಿಂದ ಬೈಕ್ ಒಂದರ ಅಣಕು ಶವಯಾತ್ರೆ ನಡೆಸಲಾಯಿತು. ಚಟ್ಟದ ಮೇಲೆ ಬೈಕ್ ಇರಿಸಿ ಹೊತ್ತು ತರಲಾಯಿತು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಾರು ತೊರೆದು ನೆಹರು ರಸ್ತೆಯಲ್ಲಿ ಕುದುರೆ ಏರಿ ಬಂದರು.
ಯುವ ಮೋರ್ಚಾ ಕಾರ್ಯಕರ್ತರು ದುರ್ಗಿಗುಡಿಯಿಂದ ಮಾರುತಿ ಕಾರೊಂದನ್ನು ಹಗ್ಗ ಕಟ್ಟಿ ಎಳೆದು ತಂದರು. ಅದರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖವಾಡ ಧರಿಸಿದ್ದವರನ್ನು ಕೂರಿಸಲಾಗಿತ್ತು. ಇಬ್ಬರ ಕೈಯಲ್ಲೂ ಖಾಲಿ ಚಿಪ್ಪು ಮತ್ತು ದಾಸವಾಳ ಹೂವು ಇದ್ದವು.
ರೈತ ಮೋರ್ಚಾದ ಕಾರ್ಯಕರ್ತರು ಎತ್ತಿನ ಗಾಡಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಸ್ತೂರ ಬಾ ಕಾಲೇಜು ರಸ್ತೆಯಿಂದ ದ್ವಿಚಕ್ರ ವಾಹನಗಳಿಗೆ ಹಗ್ಗ ಕಟ್ಟಿ ಎಳೆದುಕೊಂಡು ಬಂದು ಪ್ರತಿಭಟಿಸಿದರು. ಗೋಪಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನಾ ಸಭೆ ನಡೆಸಲಾಯಿತು.
ಯಾರೆಲ್ಲ ಏನೆಲ್ಲ ಹೇಳಿದರು?
ಎಸ್.ಎನ್.ಚನ್ನಬಸಪ್ಪ, ಶಾಸಕ : ಸರ್ಕಾರ ಒಂದು ಕಡೆ ಎಲ್ಲ ಉಚಿತವಾಗಿ ಕೊಡಬೇಕು ಎಂದು ಹೊರಟಿದೆ. ಮತ್ತೊಂದು ಕಡೆ ದುಪ್ಪಟ್ಟು ವಸೂಲಿ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ನಾಗರಿಕರಿಗೆ ಮಾಡಿದ ದ್ರೋಹ. ಈ ಸರ್ಕಾರ ಎಲ್ಲ ರೀತಿಯಿಂದಲು ಪಾಪರ್ ಆಗಿದೆ. ಎಲ್ಲರ ಜೇಬಿಗು ಕನ್ನಾ ಹಾಕುತ್ತಿದೆ. ಇಂತಹ ಸರ್ಕಾರ ಹೆಚ್ಚು ದಿನ ಇರಲು ಬಿಡಬಾರದು.
ಭಾರತಿ ಶೆಟ್ಟಿ, ವಿಧಾನ ಪರಿಷತ್ ಸದಸ್ಯೆ : ರಾಜ್ಯದಲ್ಲಿ ಬಿಜೆಪಿ ಇದ್ದಾಗ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸಿತ್ತು. ಆದರೆ ಈಗ ಜನರ ಬದುಕಿನ ಮೇಲೆ ಬರೆ ಎಳೆಯುವ ಕೆಲಸವಾಗುತ್ತಿದೆ. ಬೆಲೆ ಏರಿಕೆಯ ನೇರ ಪರಿಣಾಮ ಅಡುಗೆ ಮನೆ ಮೇಲೆ ಉಂಟಾಗುತ್ತದೆ. ತರಕಾರಿ, ಎಣ್ಣೆ ಎಲ್ಲವೂ ದುಬಾರಿ ಆಗಿದೆ. ನಮ್ಮ ರಾಜ್ಯದ ಹಣ ಪಕ್ಕದ ರಾಜ್ಯಕ್ಕೆ ಹೋಗುತ್ತಿದೆ. ನಿಗಮದ ಹಣ ಹೋಗಿರುವುದೆ ಇದಕ್ಕೆ ಸಾಕ್ಷಿ.
ಇದನ್ನೂ ಓದಿ – ಗೋಪಿ ಸರ್ಕಲ್‌ನಲ್ಲಿ ಎಂ.ಬಿ.ಭಾನುಪ್ರಕಾಶ್ ಕೊನೆಯ ಭಾಷಣ, ಏನೆಲ್ಲ ಹೇಳಿದ್ದರು?, ಇಲ್ಲಿದೆ ಡಿಟೇಲ್ಸ್
ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ : ಪೆಟ್ರೋಲ್, ಡಿಸೇಲ್ ದರವನ್ನು ಕೇಂದ್ರ ಸರ್ಕಾರ ಮಾತ್ರ ಏರಿಕೆ ಮಾಡಲಿದೆ ಎಂದು ಜನರು ಭಾವಿಸುತ್ತಾರೆ. ಈಗ ದರ ಹೆಚ್ಚಳ ಮಾಡಿರುವುದು ರಾಜ್ಯ ಸರ್ಕಾರ. ಇದನ್ನು ನಮ್ಮ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಬೇಕು.
ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200