ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 16 OCTOBER 2024 : ಶರಾವತಿ, ಚಕ್ರಾ, ವಾರಾಹಿ, ಸಾವೆಹಕ್ಲು, ತುಂಗಾ, ಭದ್ರಾ ಅಣೆಕಟ್ಟೆಗಳಿಗೆ ಭೂಮಿ ತ್ಯಾಗ ಮಾಡಿದ ರೈತರಿಗೆ ಸರ್ಕಾರಗಳು ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿವೆ. ಈ ಭಾಗದ ರೈತರ ಭವಿಷ್ಯದ ಮೇಲೆ ತೂಗುಗತ್ತಿ ಇದೆ. ಹಾಗಾಗಿ ಪ್ರತ್ಯೇಕ ರಾಜ್ಯದ ಕೂಗೆದ್ದಿದೆ. ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ಬೆಳಗಾವಿ ಸೇರಿದಂತೆ 12 ಜಿಲ್ಲೆಗಳನ್ನು ಒಳಗೊಂಡು ಪ್ರತ್ಯೇಕ ರಾಜ್ಯ (Malnad) ಸ್ಥಾಪನೆಯ ಕೂಗು ಎದ್ದಿದೆ.
ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅ.21ರ ಬೆಳಗ್ಗೆ 11 ಗಂಟೆಯಿಂದ ಸಾಗರ ತಾಲೂಕು ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ವಿವಿಧ ಸಂಘಟನೆಗಳ ಪ್ರಮುಖರು ಸುದ್ದಿಗೋಷ್ಠಿ ನಡೆಸಿದರು. ಆಗ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದೆ.
ಯಾರೆಲ್ಲ ಏನೆಲ್ಲ ಹೇಳಿದರು?
ರೈತರತ್ತ ಸರ್ಕಾರಗಳಿಗೆ ನಿರ್ಲಕ್ಷ್ಯ ಭಾವವಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದವರು ಮಲೆನಾಡಿಗರನ್ನು ಬ್ರಿಟೀಷರಿಗಿಂತಲು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮಲೆನಾಡಿಗೆ ಪ್ರತ್ಯೇಕ ರಾಜ್ಯದ ರೂಪುರೇಷೆ ಸಿದ್ಧಪಡಿಸುವ ಅನಿವಾರ್ಯತೆ ಇದೆ. ಬೆಳಗಾವಿಯಿಂದ ಕೊಡಗು ಜಿಲ್ಲೆ ಒಳಗೊಂಡು ಪ್ರತ್ಯೇಕ ರಾಜ್ಯ ರಚಿಸಬೇಕು ಎಂದು ಹಲವು ಬಾರಿ ಚರ್ಚಿಸಲಾಗಿದೆ. ಈ ಬಾರಿ ರೈತರ ಹೋರಾಟವು ಕಾಗೋಡು ಚಳವಳಿ ಮಾದರಿಯಲ್ಲೇ ಆಹೋರಾತ್ರಿ ನಡೆಯಲಿದೆ. ಪೊಳ್ಳು ಭರವಸೆಗಳಿಗೆ ಜಗ್ಗುವುದಿಲ್ಲ.
ದಿನೇಶ್ ಸಿರಿವಾಳ, ರೈತ ಹೋರಾಟಗಾರ
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಪಾದಯಾತ್ರೆ ಮಾಡಿ ಎರಡು ವರ್ಷ ತುಂಬಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಸ್ಯೆಯ ಬಗ್ಗೆ ಅರಿವೇ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಸಭೆ ನಡೆಸಿ, ಕೇಂದ್ರದ ಹಂತದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಅವರು ತಮ್ಮ ಕರ್ತವ್ಯ ಮರೆತಿದ್ದಾರೆ. ಇದೆಲ್ಲದಕ್ಕೂ ಈ ಹೋರಾಟದಲ್ಲಿ ಉತ್ತರ ಕಂಡುಕೊಳ್ಳಲಿದ್ದೇವೆ. ಬೇಡಿಕೆಗಳು ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ.
ತೀ.ನಾ.ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ
ಮುಳುಗಡೆ ಸಂತ್ರಸ್ತರ ಸಮಸ್ಯೆ ಸಂಬಂಧ ಕಾರ್ಯಪಡೆ (ಟಾಸ್ಕ್ ಫೋರ್ಸ್) ರಚಿಸುವವರಿಗೆ ಹೋರಾಟ ನಿಲ್ಲುವುದಿಲ್ಲ. ಆಶ್ವಾಸನೆಯ ಸುತ್ತೋಲೆ ಹೊರಡಿಸಿದರೆ, ಹೋರಾಟ ಹಿಂಪಡೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಅಧಿಕೃತ ಆದೇಶವಾಗಬೇಕು.
ವಿ.ಜಿ.ಶ್ರೀಕಾರ, ಸಮಾಜ ಸೇವಾ ಕಾರ್ಯಕರ್ತ
ಪ್ರಮುಖರಾದ ಶಿವಾನಂದ ಕುಗ್ವೆ, ರಾಷ್ಟ್ರೀಯ ಈಡಿಗ ಮಹಾಮಂಡಳ ತಾಲೂಕು ಅಧ್ಯಕ್ಷ ಮಂಜುನಾಥ, ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕ ಕೊನೆಯುಸಿರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422