ಶಿವಮೊಗ್ಗ ಮೃಗಾಲಯದ ನೀರಾನೆ ಹಂಸಿಣಿ ಇನ್ನಿಲ್ಲ, ಆಗಿದ್ದೇನು?

Published On : ಏಪ್ರಿಲ್ 14, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿದ್ದ 12 ವರ್ಷದ ಹೆಣ್ಣು ನೀರಾನೆ (hippopotamus) ಹಂಸಿಣಿ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನೀರಾನೆಗೆ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು.

ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3:08ಕ್ಕೆ ಹಂಸಿಣಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷನರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗರ್ಭದಲ್ಲೇ ಮೃತಪಟ್ಟಿದ್ದ ಭ್ರೂಣ

ಹಂಸಿಣಿ ಗರ್ಭಿಣಿಯಾಗಿದ್ದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಎಂಟು ತಿಂಗಳ ಗರ್ಭಧಾರಣೆಯ ಅವಧಿಯು ಮಾರ್ಚ್ ಮಧ್ಯಭಾಗದಲ್ಲೇ ಪೂರ್ಣಗೊಂಡಿತ್ತು. ಆದರೆ ಪ್ರಸವದ ಲಕ್ಷಣಗಳು ಕಂಡುಬಂದಿರಲಿಲ್ಲ. ಇನ್ನೊಂದೆಡೆ ಕಳೆದ ಕೆಲವು ದಿನಗಳಿಂದ ಆಹಾರ ಸೇವನೆ ಕಡಿಮೆ ಮಾಡಿದ್ದ ನೀರಾನೆ, ಮಂದಗತಿಯಲ್ಲಿ ವರ್ತಿಸುತ್ತಿತ್ತು.

hippopotamus -Hasmsini-at-Shimoga-Zoo-succumbed

ಏಪ್ರಿಲ್‌ 10ರಂದು ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಪಶುವೈದ್ಯರ ತಂಡವು ನೀರಾನೆಯ ಆರೋಗ್ಯ ತಪಾಸಣೆ ನಡೆಸಿ, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ನೀರಾನೆಯ ಗರ್ಭಾಶಯದಲ್ಲಿ ಗಂಭೀರವಾದ ಸೋಂಕು ಇರುವುದು ಪತ್ತೆಯಾಗಿತ್ತು. ಗರ್ಭಾಶಯದ ಒಳಗಿನ ಭ್ರೂಣ ಮರಣ ಹೊಂದಿದ್ದೇ ಈ ಸೋಂಕಿಗೆ ಪ್ರಮುಖ ಕಾರಣ ಎಂದು ವೈದ್ಯರು ತಿಳಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಸಾವು

ನೀರಾನೆಯ ದೇಹದ ಪ್ರಮುಖ ಅಂಗಾಂಗಗಳಿಗೆ ಸೋಂಕು ತೀವ್ರ ಪರಿಣಾಮ ಬೀರಿದ್ದರಿಂದ ಅದರ ಚೇತರಿಕೆಯ ಸಾಧ್ಯತೆ ಕಡಿಮೆ ಇತ್ತು. ಮೈಸೂರಿನ ವನ್ಯಜೀವಿ ಪಶುವೈದ್ಯರು ಹಾಗೂ ಸ್ತ್ರೀರೋಗ ತಜ್ಞ ಪಶುವೈದ್ಯರ ಸಲಹೆಯಂತೆ ಸತತ ಔಷಧೋಪಚಾರ ಮತ್ತು ಆರೈಕೆ ನೀಡಲಾಗಿತ್ತು. ಆದರೂ ಸೋಂಕಿನ ತೀವ್ರತೆಯಿಂದಾಗಿ ಹಂಸಿಣಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಸೂರಿನಿಂದ ಬಂದಿದ್ದ ಹಂಸಿಣಿ

ಹಂಸಿಣಿಯನ್ನು 2022ರಲ್ಲಿ ಮೈಸೂರಿನಿಂದ ತ್ಯಾವರೆಕೊಪ್ಪ ಮೃಗಾಲಯಕ್ಕೆ ಕರೆತರಲಾಗಿತ್ತು. ಇಲ್ಲಿ ಬಂದಾಗ ಎರಡು ಬಾರಿ ಗರ್ಭ ಧರಿಸಿದ್ದ ಹಂಸಿಣಿ, ಎರಡೂ ಬಾರಿ ವಿವಿಧ ಕಾರಣಕ್ಕೆ ಮರಿಯನ್ನು ಕಳೆದುಕೊಂಡಿತ್ತು. ಮೂರನೆ ಬಾರಿ ಗರ್ಭ ಧರಿಸಿತ್ತು. ಆದರೆ ಮಾರ್ಚ್‌ 18ರಿಂದ ಆಹಾರ ತ್ಯಜಿಸಿತ್ತು. ಕಳೆದ ಮಾರ್ಚ್ 19ರಂದು ಚಿಕಿತ್ಸೆ ನೀಡಲು ಹೋದಾಗ ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆ ಸಮೀಕ್ಷಾ ಮಾರ್ಚ್ 20ರಂದು ಮೃತಪಟ್ಟಿದ್ದರು. ಮೃತ ವೈದ್ಯೆಯ ಕುಟುಂಬಕ್ಕೆ ಈ ಘಟನೆ ತೀವ್ರ ಆಘಾತ ತಂದಿತ್ತು. ಇದೀಗ ದಾಳಿ ನಡೆಸಿದ್ದ ನೀರಾನೆಯೂ ಸಾವನ್ನಪ್ಪಿರುವುದು ಮೃಗಾಲಯದ ಸಿಬ್ಬಂದಿಯಲ್ಲಿ ವಿಷಾದ ಮೂಡಿಸಿದೆ.

ಇದನ್ನೂ ಓದಿ : ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 14, 2026

Leave a Comment