ಶಿವಮೊಗ್ಗ ಲೈವ್.ಕಾಂ | SHIMOGA | 07 ಡಿಸೆಂಬರ್ 2019
ಕಾಲೇಜಿನಿಂದ ಸರ್ವೇ ಕ್ಯಾಂಪ್’ಗೆ ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಆದರೆ ಕಾಲೇಜು ಆಡಳಿತ ಮಂಡಳಿಯ ಭಿನ್ನ ಹೇಳಿಕೆ, ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಗಳಲ್ಲಿ ಗೊಂದಲ ಸೃಷ್ಟಿಸಿತು. ಇದರಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶವಾಗಾರದ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪರಿಣಿತಾ (20) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ಪಿಇಎಸ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದ ಪರಿಣಿತಾ ಸರ್ವೇ ಕ್ಯಾಂಪ್’ಗೆ ತೆರಳಿದ್ದಳು. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾಳೆ.
ಹೇಗಾಯ್ತು ಆಪಘಾತ?
ಶಿವಮೊಗ್ಗದ ಬೀರನಕೆರೆ ಗ್ರಾಮದಲ್ಲಿ ಪಿಇಎಸ್ ಕಾಲೇಜು ವತಿಯಿಂದ ಕ್ಯಾಂಪ್ ಹಾಕಲಾಗಿತ್ತು. 22 ವಿದ್ಯಾರ್ಥಿಗಳು ಮತ್ತು ತರಬೇತುದಾರರು ಡಿ.4 ರಿಂದ ತರಬೇತಿ ಕ್ಯಾಂಪ್’ಗೆ ತೆರಳಿದ್ದರು. ‘ನಿನ್ನೆ ಬೆಳಗ್ಗೆ ವಾಕಿಂಗ್ ಹೋಗೋಣ ಅಂತಾ ಹೇಳಿದ್ದಳು. ನಾವೆಲ್ಲ ಒಟ್ಟಿಗೆ ವಾಕ್ ಮಾಡಿ ಬಂದಿದ್ದೆವು. ಹಾಗೆ ಇವತ್ತು ಬೆಳಗ್ಗೆ ವಾಕಿಂಗ್ ಹೋದಾಗ, ರಸ್ತೆಯಲ್ಲ ಪಕ್ಕದಲ್ಲಿ ನಡೆದು ಹೋಗುತ್ತಿದ್ದೆವು. ಈ ವೇಳೆ ಹಿಂದೆಯಿಂದ ಏನೋ ಬಂದು ಗುದ್ದಿದ ಹಾಗೆ ಆಯಿತು. ಏನಾಯ್ತು ಎಂದು ತಿಳಿಯಲಿಲ್ಲ. ಜೊತೆಗಿದ್ದ ಇನ್ಸ್’ಟ್ರಕ್ಟರ್ ಬಂದು ನನ್ನನ್ನು ಎಚ್ಚರಗೊಳಿಸಿದ. ಮುಂದೆ ನೋಡಿದರೆ ಪರಿಣಿತ ಬಿದ್ದಿದ್ದಳು’ ಎಂದು ಗದ್ಗದಿತರಾಗಿ ಅಪಘಾತವನ್ನು ವರ್ಣಿಸುತ್ತಾರೆ ಉಪನ್ಯಾಸಕಿ ರಚಿತಾ.
ಹಿಟ್ ಅಂಡ್ ರನ್ ಆರೋಪ
ಬೆಳಗ್ಗೆ 6 ಗಂಟೆ ಹೊತ್ತಿಗೆ ವಾಕಿಂಗ್ ತೆರಳಿದ್ದವರಿಗೆ ಡಿಕ್ಕಿ ಹೊಡೆದ ವಾಹನ ಸ್ಥಳದಿಂದ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ. ‘ಡಿಕ್ಕಿಯಾದಾಗ ನನಗೆ ಏನಾಯ್ತು ತಿಳಿಯದೆ ಬಿದ್ದಿದ್ದೆ. ಇನ್ಸ್’ಟ್ರಕ್ಟರ್ ಎಬ್ಬಿಸಿದಾಗ ಮುಂದಕ್ಕೆ ಒಂದು ಕಾರು ನಿಂತಿತ್ತು. ಆದರೆ ಅದು ಡಿಕ್ಕಿ ಹೊಡೆದ ಕಾರು ಹೌದು ಅಲ್ಲವೋ ಗೊತ್ತಿಲ್ಲ. ಅವರು ಕೆಳಗಿಳಿದು ಪರಿಣಿತಾಗೆ ಎಚ್ಚರಿಸುತ್ತಿದ್ದರು. ಆದರೆ ಅವಳು ಉಸಿರಾಡುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಆಂಬುಲೆನ್ಸ್ ಬಂತು’ ಅಂತಾರೆ ಉಪನ್ಯಾಸಕಿ ರಚಿತಾ.
ಶವಾಗಾರದ ಮುಂದೆ ಹೈಡ್ರಾಮಾ
ಅಪಘಾತದ ಬಳಿಕ ವಿದ್ಯಾರ್ಥಿನಿ ಪರಿಣಿತಾಳನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ವೈದ್ಯರು ಪರಿಣಿತಾ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ವಿಚಾರ ಪೋಷಕರಿಗೆ ತಿಳಿದು ಆಸ್ಪತ್ರೆ ಬಳಿ ಬಂದಿದ್ದಾರೆ. ‘ಆಸ್ಪತ್ರೆಗೆ ಬಂದಾಗ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದರು. 11 ಗಂಟೆವರೆಗೆ ಮ್ಯಾನೇಜ್’ಮೆಂಟ್’ನ ಯಾರೊಬ್ಬರು ಬಂದು ಉತ್ತರಿಸುತ್ತಿಲ್ಲ. ಬದಲಾಗಿ ವಾಚ್’ಮನ್, ಪ್ಯೂಯನ್ ಕಳಿಸಿ ಒಂದೊಂದು ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ಆರೋಪಿಸಿದರು ಪರಿಣಿತಾ ತಂದೆ ಸಿದ್ಧಲಿಂಗೇಗೌಡ. ಇದೇ ಕಾರಣಕ್ಕೆ ಶವಾಗಾರದ ಮುಂದೆ ಕೆಲಕಾಲ ಹೈಡ್ರಾಮಾ ನಡೆಯಿತು.
ಶವವನ್ನು ಕಾಲೇಜಿಗೆ ಕೊಂಡೊಯ್ಯಿರಿ
ಗೊಂದಲದ ನಡುವೆ ಪರಿಣಿತ ಪರವಾಗಿ ಅವರ ಸಂಬಂಧಿಕರು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆಯಿತು. ಶಿಕ್ಷಣ ಸಂಸ್ಥೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿದರು. ಹಾಗಾಗಿ ಶಿಕ್ಷಣ ಸಂಸ್ಥೆಗೆ ಮೃತದೇಹವನ್ನು ಕೊಂಡೊಯ್ಯಿರಿ ಎಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪೋಷಕರು ಮತ್ತು ಸಂಬಂಧಿಗಳನ್ನು ಸಮಾಧಾನಪಡಿಸಿದರು.
ನಂತರ ಭದ್ರಾವತಿಯ ಜನ್ನಾಪುರದಲ್ಲಿರುವ ಪರಿಣಿತಾ ಮನೆಗೆ ಮೃತದೇಹ ಕೊಂಡೊಯ್ಯಲಾಯಿತು. ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಡಿವೈಎಸ್’ಪಿ ಉಮೇಶ್ ನಾಯ್ಕ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
A hit and run case has been registered in Shimoga Beeranakere village, Where PES College students had been to a civil engineering survey. Parents of the students claim it a murder.