ಶಿವಮೊಗ್ಗ ಲೈವ್.ಕಾಂ | SHIMOGA | 07 ಜನವರಿ 2020
ಶಿವಮೊಗ್ಗದ ಅಸಿಸ್ಟೆಂಟ್ ಕಮಿಷನರ್ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು 12 ದಿನದ ಬಳಿಕ ಮತ್ತೊಂದು ದೂರು ದಾಖಲಾಗಿದೆ. ಸರ್ಕಾರಿ ಶಾಲೆ ಶಿಕ್ಷಕರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅವರ ಪತ್ನಿ ಸುಮಾ (44) ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ನಿಸರ್ಗ ಲೇಔಟ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡಿಸೆಂಬರ್ 24ರಂದು ಘಟನೆ ನಡೆದಿತ್ತು.
ಮಗುವಾಗಿಲ್ಲ ಎಂದು ಮನನೊಂದಿದ್ದರು
ಶಿಕ್ಷಕಿಯಾಗಿದ್ದ ಸುಮಾ ಅವರು ಎಂದಿನಂತೆ ಡಿ.24ರಂದು ಮನೆಗೆ ಬಂದು ತಮ್ಮ ಕೊಠಡಿಯಲ್ಲಿ ವಿರಮಿಸಲು ತೆರಳಿದ್ದರು. ಅದೇ ವೇಳೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರಿಗೆ ವಿಚಾರ ತಿಳಿದು ಕೂಡಲೇ ಸುಮಾ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ಹೊತ್ತಿಗಾಗಲೇ ಸುಮಾ ಅವರು ಕೊನೆಯುಸಿರೆಳೆದಿದ್ದರು. ಮದುವೆಯಾಗಿ 12 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಮಾ ಅವರ ಪೋಷಕರು ದೂರಿನಲ್ಲಿ ತಿಳಿಸಿದ್ದರು.
ಕೊನೆಯ ಫೋನ್ ಕರೆಯಿಂದ ಪ್ರಕರಣಕ್ಕೆ ಟ್ವಿಸ್ಟ್
ಘಟನೆ ಬಳಿಕ ಸುಮಾ ಅವರ ಫೋನ್ ಪರಿಶೀಲನೆ ವೇಳೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಮಾ ಅವರು ಅಂತಿಮವಾಗಿ ಶಿಕ್ಷಕರೊಬ್ಬರಿಗೆ ಕರೆ ಮಾಡಿದ್ದರು. ಅವರೊಂದಿಗೆ ನಡೆಸಿದ ಸಂಭಾಷಣೆಯ ಆಧಾರದ ಮೇಲೆ ಶಿಕ್ಷಕರೊಬ್ಬರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಯಾರದು ಶಿಕ್ಷಕರು? ಕೊನೆ ಸಂಭಾಷಣೆ ಏನು?
ಸುಮಾ ಅವರು ಶಿವಮೊಗ್ಗದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಮುನ್ನ ಕೆಜಿಎಸ್ ಎಂಬ ಶಿಕ್ಷಕಿಗೆ ಕರೆ ಮಾಡಿದ್ದರು. ಅವರೊಂದಿಗೆ ಮಾತನಾಡುವಾಗ ಸರಸ್ವತಿ ಎಂಬ ಶಿಕ್ಷಕಿ ಕಿರುಕುಳ ಕೊಡುತ್ತಿರುವ ಕುರಿತು ತಿಳಿಸಿದ್ದರು. ಅಲ್ಲದೇ ಕೊಠಡಿಯಲ್ಲೇ ಎನಾದರು ಮಾಡಿಕೊಳ್ಳಬೇಕು ಎಂದು ಅನಿಸುತ್ತಿದೆ ಎಂದಿದ್ದರು. ಈ ಶಿಕ್ಷಕಿಯ ಕಿರುಕುಳದ ಕುರಿತು ಪತಿ ಟಿ.ವಿ.ಪ್ರಕಾಶ್ ಅವರೊಂದಿಗೂ ಸುಮಾ ಅವರು ಚರ್ಚಿಸಿದ್ದರು.
ಇತ್ತೀಚೆಗಷ್ಟೇ ಸುಮಾ ಅವರು ಶಿವಮೊಗ್ಗದ ಸರ್ಕಾರಿ ಪ್ರೌಢಶಾಲೆಗೆ ವರ್ಗವಾಗಿದ್ದರು. ಈ ಮೊದಲು ಭದ್ರಾವತಿಯ ಸಂಚಿಹೊನ್ನಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೊಸದಾಗಿ ಬಂದಿರುವುದರಿಂದ ಕೆಲಸದಲ್ಲಿ ಹೊಂದಾಣಿಕೆ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಆಗುತ್ತಿರಬಹುದು ಎಂದು ಪತಿ ಪ್ರಕಾಶ್ ಅವರು ಸುಮಾ ಅವರಿಗೆ ಸಮಾಧಾನ ಹೇಳಿದ್ದರು. ಆದರೆ ಕಿರುಕುಳ ಹೆಚ್ಚಾದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲು ಮಾಡಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
