ಶಿವಮೊಗ್ಗ ಲೈವ್.ಕಾಂ | SHIMOGA | 11 ಫೆಬ್ರವರಿ 2020

ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನಿಲ್ಲಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುವೆಂಪು ವಿವಿ ಮಾನ್ಯತೆ ಪಡೆದ ಸ್ಟೂಡೆಂಟ್ ಡೆವಲಪ್ಮೆಂಟ್ ಟ್ರಸ್ಟ್ ಮತ್ತು ಕೆಸಿಇ ಫೌಂಡೇಷನ್ ಫೆಬ್ರವರಿ 6ರಂದು ಹುಬ್ಬಳ್ಳಿಯ ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸುತ್ತಿದ್ದ ಪರೀಕ್ಷೆಯಲ್ಲಿ ಮತ್ತು ಫೆ.10ರಂದು ಸ್ಫೂರ್ತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಕಲು ಆರೋಪ ಹೊತ್ತಿರುವ ಪರೀಕ್ಷಾ ಕೇಂದ್ರಗಳು ಸೇರಿದಂತೆ ಎಲ್ಲ ಕೇಂದ್ರದಲ್ಲೂ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಸೂಕ್ತ ಸಿಬ್ಬಂದಿ ಕಳುಹಿಸಿಕೊಡಲಾಗಿದೆ. ಪರಿವೀಕ್ಷಣೆಗೆ ಪರೀಕ್ಷಾ ಸ್ಕ್ವಾಡ್’ಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯಾದ್ಯಂತ ಕುವೆಂಪು ವಿವಿಯ ದೂರಶಿಕ್ಷಣ ಪರೀಕ್ಷಾ ಕೇಂದ್ರಗಳಲ್ಲಿ ನಕಲಿಗೆ ಆಸ್ಪದ ನೀಡದಂತೆ ಅಧ್ಯಯನ ಕೇಂದ್ರಗಳ ಸಂಚಾಲಕರು ಮತ್ತು ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿವಿ ಸಿಬ್ಬಂದಿಗೆ ಸೂಕ್ತ ನಿರ್ದೇಶನಗಳನ್ನು ಈಗಾಗಲೇ ನೀಡಲಾಗಿತ್ತು.

ಒಂದುವೇಳೆ, ನಕಲು ಮಾಡುವುದು ಅಥವಾ ಮಾಡಿಸುವುದು ವಿವಿ ಗಮನಕ್ಕೆ ಬಂದರೆ ಅಂತಹ ಅಧ್ಯಯನ ಕೇಂದ್ರಗಳ ಪರವಾನಗಿ ರದ್ದುಪಡಿಸಲಾಗುವುದು. ಸಂಬಂಧಪಟ್ಟ ವಿವಿ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಫೂರ್ತಿ ಎಜುಕೇಷನ್ ಟ್ರಸ್ಟ್ ಹುಬ್ಬಳ್ಳಿಯ ಸೂಡೆಂಟ್ ಡೆವಲಪ್ಮೆಂಟ್ ಟ್ರಸ್ಟ್ ಮತ್ತು ಕೆಸಿಇ ಫೌಂಡೇಷನ್ ಅಧ್ಯಯನ ಕೇಂದ್ರಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನೀಡಲಾಗುವುದಿಲ್ಲಜತೆಗೆ, ಈ ಕೇಂದ್ರಗಳಿಗೆ ಪರೀಕ್ಷೆ ನಡೆಸಲು ತೆರಳಿರುವ ವಿವಿ ಸಿಬ್ಬಂದಿಯನ್ನು ಮುಂದಿನ ಎರಡು ವರ್ಷ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗುವುದಿಲ್ಲ. ಇನ್ನು ಸ್ಫೂರ್ತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ನಕಲುಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]