ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 6 ಸೆಪ್ಟೆಂಬರ್ 2019
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೈವೋಲ್ಟೇಜ್ ಚಿತ್ರ ‘ರಾಬರ್ಟ್’ಗೆ ಭದ್ರಾವತಿ ಬೆಡಗಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ, ವೆಲ್’ಕಮ್ ಹೇಳಿದೆ.
ರಾಬರ್ಟ್ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ದರ್ಶನ್ ಅವರಿಗೆ ನಾಯಕಿಯಾಗಿ ನಟಿಸುವವರು ಯಾರು ಅನ್ನುವ ಕುರಿತು ಕುತೂಹಲವಿತ್ತು. ಈಗ ಇದಕ್ಕೆ ತೆರೆ ಬಿದ್ದಿದೆ. ಆಶಾ ಭಟ್ ಅವರು ಹಿಂದಿ ಚಿತ್ರ ‘ಜಂಗ್ಲಿ’ಯಲ್ಲಿ ಅಭಿನಯಿಸಿದ್ದಾರೆ.
ಯಾರು ಈ ಆಶಾ ಭಟ್?
ಆಶಾ ಭಟ್ ಮೂಲತಃ ಭದ್ರಾವತಿಯವರು. ಇವರ ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಶ್ಯಾಮಲಾ ಭಟ್. ಭದ್ರಾವತಿಯಲ್ಲಿ ಕ್ಲಿನಿಕಲ್ ಲ್ಯಾಬ್ ನಡೆಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿವರೆಗೂ ಭದ್ರಾವತಿಯ ಸೆಂಟ್ ಚಾರ್ಲ್ಸ್ ಶಾಲೆಯಲ್ಲಿ ಓದಿದ ಆಶಾ ಭಟ್, ಈಗ ಎಂಜಿನಿಯರಿಂಗ್ ಪದವೀಧರೆ. ವಿದ್ಯಾಭ್ಯಾಸದ ಜೊತೆಗೆ ಮಾಡಲಿಂಗ್ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡ ಆಶಾ ಭಟ್, ಅಂತಾರಾಷ್ಟ್ರೀಯ ಮಟ್ಟದ ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಗೆದ್ದರು. ಇದನ್ನು ಗೆದ್ದ ಮೊದಲ ಇಂಡಿಯನ್ ಎಂಬ ಹೆಗ್ಗಳಿಕೆ ಕೂಡ ಅಶಾ ಭಟ್ ಅವರದ್ದಾಗಿದೆ.
ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಗೆದ್ದು ಮರಳಿದ್ದ ಆಶಾ ಭಟ್ ಅವರಿಗೆ, ಭದ್ರಾವತಿಯಲ್ಲಿ ಸಾರ್ವಜನಿಕರು ಖುಷಿಯಿಂದ ಮೆರವಣಿಗೆ ಮಾಡಿದ್ದರು. ದೊಡ್ಡ ಸಮಾರಂಭ ಏರ್ಪಡಿಸಿ, ಸನ್ಮಾನವನ್ನೂ ಮಾಡಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
