ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಭಾರತ ಸಾಂಸ್ಕೃತಿಕವಾಗಿ ನಂಬಿಕೆ ಆಧಾರದ ಮೇಲೆ ನಿಂತಿದ್ದು ಸಾಂಸ್ಕೃತಿಕ ನೆಲೆ ಮತ್ತು ನಂಬಿಕೆ ಗಟ್ಟಿ ಇರಬೇಕು. ಯಾವುದೇ ಕಾರಣಕ್ಕೂ ಅದನ್ನು ಸಂಶಯದಿಂದ ನೋಡಬಾರದು ಎಂದು ಹಿರೇಹಡಗಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಹಾಲಸ್ವಾಮೀಜಿ ಅಭಿಪ್ರಾಯಪಟ್ಟರು.

ಕೋಟಿ ಸೀತಾರಾಮಾಂಜನೇಯ ದೇವಾಲಯದ ಬಯಲು ರಂಗಮಂದಿರದಲ್ಲಿ ಸಂಜೆ ಸಂಸ್ಕಾರ ಭಾರತಿ ದಶಮಾನೋತ್ಸವ ಸಂಭ್ರಮದ ನಿಮಿತ್ತ ‘ಭಾರತ್ ಮಾತಾ ಪೂಜನ್’ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಅವರು, ಕೆಲ ಅಯೋಗ್ಯರು ಭಾರತ ಮಾತೆಯನ್ನೇ ಅನುಮಾನದಿಂದ ನೋಡುತ್ತಿದ್ದಾರೆ. ಅಂತಹ ಅಯೋಗ್ಯರ ನಡುವೆ ರಾಷ್ಟ್ರಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪೂಜೆ, ಹೋಮ ಹವನದಲ್ಲಿ ಸಂಸ್ಕಾರ ಇರುವುದಿಲ್ಲ. ಆದರೆ ಮಾಜಿ ಪ್ರಧಾನಿಯೊಬ್ಬರು ಬೆಳಗ್ಗೆಯಿಂದ ರಾತ್ರಿವರೆಗೆ ಹೋಮ ಹವನ ಮಾಡಿಸುತ್ತಾರೆ. ಆದರೂ ಭಾರತವನ್ನು ಸುಸಂಸ್ಕೃತ ರಾಷ್ಟ್ರವಾಗಲು ಬಿಡುತ್ತಿಲ್ಲ. ಇದು ನಮ್ಮ ದುರ್ದೈವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಸಂಸ್ಕೃತಿಯನ್ನು ಮನೆ, ಮನದಿಂದ ಉಳಿಸಬೇಕಿದೆ. ಆ ಸಂಸ್ಕಾರ ಇಡೀ ದೇಶದಲ್ಲಿ ಹರಡುತ್ತದೆ. ದೇಶದ ರಕ್ಷಣೆ, ರಾಷ್ಟ್ರದ ಹಿತಕ್ಕಾಗಿ ಹಿರಿಯ ಸಮಾಜ ಜಾಗೃತವಾಗಬೇಕಿದೆ. ಇದು ನಿಂತ ಭಾರತವಲ್ಲ, ಚಲಿಸುವ ಭಾರತದ ಪ್ರಜೆಗಳಾಗಬೇಕಿದೆ ಎಂದ ಅವರು, ಈ ಹಿಂದೆ ಸಂಪೂರ್ಣ ಮಲಗಿಸಿದ್ದ, ಕುಂಕುಮ ಅಳಿಸಿದ್ದ, ಭಾರತ ಮಾತೆ ಸೆರಗು ಎಳೆಯುವವರನ್ನು ನೋಡಿದ್ದೇವೆ. ಆದರೆ ಇಂದು ಅಖಂಡ ಭಾರತ ಕಲ್ಪನೆಯಿಂದ ಭಾರತ ಮಾತೆ ಪಾದಕ್ಕೆ ಪುಷ್ಪನಮನ ಮಾಡುವಂತಾಗಿದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಂಸ್ಕಾರ ಭಾರತಿ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಪ.ರಾ.ಕೃಷ್ಣಮೂರ್ತಿ, ಸಂಸ್ಕಾರ ಭಾರತಿ ಅಧ್ಯಕ್ಷ ಎಚ್.ಕೆ.ವೆಂಕಟರಾಮ್ ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
