ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019
ಹುಲಿ, ಸಿಂಹ, ಕಡವೆ, ಜಿಂಕೆ ಸೇರಿದಂತೆ ನಾನಾ ಪಕ್ಷಿಗಳ ಇಂಚರ, ಪ್ರಾಣಿಗಳ ಚೇಷ್ಟೆಯಿಂದ ಪ್ರವಾಸಿಗರ ಮನಃಸಂತೈಸುತ್ತಿದ್ದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಧಾಮಕ್ಕೆ ಇನ್ನಷ್ಟು ಅತಿಥಿಗಳು ಬಂದಿದ್ದು, ವೀಕ್ಷಕರ ಕಣ್ಮನ ತಣಿಸಲಿವೆ.

ಕೇಂದ್ರೀಯ ಮೃಗಾಲಯ ಪ್ರಾಧಿಕಾರಕ್ಕೆ ಸೇರ್ಪಡೆಯಾದ ಬಳಿಕ ಹಲವು ಪ್ರಗತಿ ಕಾರ್ಯಗಳು ಇಲ್ಲಿ ನಡೆಯುತ್ತಿದ್ದು, ಮಲೆನಾಡಿಗೆ ಬರುವವರು ಜೋಗದ ಸಿರಿ, ನದಿ, ಜಲಪಾತಗಳ ಸೌಂದರ್ಯದೊಂದಿಗೆ ಪ್ರಾಣಿ ಸಂಗ್ರಹಾಲಯದ ಮೋಜು ಸವಿಯಲಿ ಎಂಬ ಕಾರಣಕ್ಕೆ ಸಿಂಹ ಧಾಮದ ಚಹರೆಯನ್ನೇ ಬದಲಿಸಲಾಗುತ್ತಿದೆ.
15 ಕೃಷ್ಣಮೃಗಕ್ಕೆ ತಾತ್ಕಾಲಿಕವಾಗಿ ಪ್ರತ್ಯೇಕ ಜಾಗ
ಮೊದಲ ಹಂತದಲ್ಲಿ ೧೫ ಕೃಷ್ಣ ಮೃಗ (ಬ್ಲ್ಯಾಕ್ ಬಕ್)ಗಳನ್ನು ಮೈಸೂರು ಮೃಗಾಲಯದಿಂದ ನಾಲ್ಕು ದಿನಗಳ ಹಿಂದೆ ತರಲಾಗಿದೆ. ಈ ಮುಂಚೆ ಏಳೆಂಟು ವರ್ಷದ ಒಂದು ಕೃಷ್ಣಮೃಗವಿತ್ತು. ಈಗ ಅದರೊಂದಿಗೆ ಇನ್ನೂ ೧೫ ಸೇರಿಕೊಂಡಿವೆ. ಕಡವೆ, ಜಿಂಕೆಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿಯೇ ಇವುಗಳನ್ನು ಇಡಬಹುದು. ಆದರೆ, ಹೊಸದಾಗಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅರ್ಧ ಎಕರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ. ೧೦ ದಿನ ಇಲ್ಲಿಯೇ ಇರಿಸಿ ನಂತರ ಅವುಗಳನ್ನು ಸ್ಥಳಾಂತರ ಮಾಡಲಾಗುವುದು.
೧೫ರಲ್ಲಿ ನಾಲ್ಕು ಮರಿಗಳಿದ್ದು, ಅವುಗಳಿಗೆ ಆಹಾರದ ಕೊರತೆ ಇಲ್ಲ. ಸಿಂಹ ಧಾಮದಲ್ಲಿಯೇ ಪ್ರಾಣಿಗಳಿಗಾಗಿ ಆಹಾರ ಪದಾರ್ಥ, ಹುಲ್ಲು ಬೆಳೆಸಲಾಗುತ್ತಿದೆ. ಅವುಗಳನ್ನೆ ತಿನ್ನಲು ನೀಡಲಾಗುತ್ತಿದೆ.
ಬ್ಲ್ಯಾಕ್ ಬಕ್ಗಳನ್ನು ಖರೀದಿಸದಬೇಕಾದರೆ, ಪ್ರತಿಯೊಂದರ ಬೆಲೆ ಎರಡು ಲಕ್ಷ ರೂ. ಇದೆ. ಆದರೆ, ಮೈಸೂರಿನಲ್ಲಿ ಸಾಕಷ್ಟು ಪ್ರಮಾಣದ ಬ್ಲ್ಯಾಕ್ ಬಕ್ಗಳಿರುವುದರಿಂದ ಉಚಿತವಾಗಿ ನೀಡಲಾಗಿದೆ.

ಪಕ್ಷಿಗಳ ಲೋಕಕ್ಕೆ ಇನ್ನೆರಡು ಪ್ರಭೇದ ಸೇರ್ಪಡೆ
ಈಗಾಗಲೇ ಸಾಕಷ್ಟು ಪ್ರಭೇದದ ಪಕ್ಷಿಗಳು ಸಿಂಹ ಧಾಮದಲ್ಲಿವೆ. ಪಕ್ಷಿ ಪ್ರೇಮಿಗಳಿಗೆ ಇನ್ನಷ್ಟು ಮನೋರಂಜನೆ ನೀಡಲು ಕೆಂಪು ಕಾಡು ಕೋಳಿ, ಚೈನೀಸ್ ರಿಂಗ್ ನೆಕ್ಡ್ ಫಿಸನ್ ಎಂಬ ಹೊಸ ಜಾತಿಯ ಪಕ್ಷಿಗಳನ್ನು ತರಲಾಗಿದೆ.
ಜತೆಗೆ, ಈ ಹಿಂದೆಯೇ ಇದ್ದ ಹಲವು ಪ್ರಾಣಿಗಳೊಂದಿಗೆ ಹೆಚ್ಚುವರಿಯಾಗಿ ಇನ್ನಷ್ಟು ತರಿಸಿಕೊಳ್ಳಲಾಗಿದೆ. ಈ ಮುಂಚೆ ಆರು ನೀಲ್ ಗಾಯ್ ಗಳಿದ್ದವು, ಇವುಗಳೊಂದಿಗೆ ಇನ್ನೆರಡು ಸೇರಿ ಸಂಖ್ಯೆ ೮ಕ್ಕೇರಿದೆ. ಬ್ಲ್ಯಾಕ್ ಸ್ವಾನ್ ಎರಡು ಇದ್ದವು, ೪ ಅತಿಥಿಗಳ ಸೇರ್ಪಡೆಯಾಗಿದೆ. ೨ ಪೈಥಾನ್’ಗಳೊಂದಿಗೆ ಇನ್ನೆರಡು ಸೇರ್ಪಡೆಯಾಗಿವೆ. ಮೂರು ಎಮೋಗಳೊಂದಿಗೆ ಆರು ಹೊಸದಾಗಿ ತರಿಸಲಾಗಿದೆ. ಹೈನಾಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೆಲವೇ ದಿನಗಳಲ್ಲಿ ಸಿಂಹ ಧಾಮಕ್ಕೆ ಇದೂ ಸೇರ್ಪಡೆಯಾಗಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]