ಶಿವಮೊಗ್ಗ ಲೈವ್.ಕಾಂ | SHIMOGA | 22 ಡಿಸೆಂಬರ್ 2019
ಬ್ಯಾಲೆಟ್ ಪೇಪರ್ ಗೊಂದಲದಿಂದ ಕುರುಬರ ಸಂಘದ ನಿರ್ದೇಶಕರ ಸ್ಥಾನದ ಮತದಾನ ರದ್ದುಗೊಳ್ಳುತ್ತಿದ್ದಂತೆ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಹೈಡ್ರಾಮಾ ನಡೆಯಿತು. ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವರು ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದರು.
ಕಣ್ಣೀರಿಟ್ಟ ಅಭ್ಯರ್ಥಿ ಕುಟುಂಬ
ಚುನಾವಣೆಗಾಗಿ ಮನೆ ಮನೆ ಸುತ್ತಿ, ಮತದಾರರನ್ನು ಮನವೊಲಿಸಿದ್ದ ಅಭ್ಯರ್ಥಿಯ ಕುಟುಂಬವೊಂದು, ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ಕಣ್ಣೀರು ಹಾಕಿತು. ಮತದಾರರೇ ಇಡೀ ಕುಟುಂಬವನ್ನು ಸಮಾಧಾನಪಡಿಸಿತು. ಅಭ್ಯರ್ಥಿಯ ಪತಿ ಶ್ರೀನಿವಾಸ್ ಅವರು ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು. ಮತ್ತೊಂದೆಡೆ ಅಭ್ಯರ್ಥಿ ಮಂಜುಳಾ ಅವರು ಕಣ್ಣೀರು ಹಾಕಿದರು. ಕೂಡಲೆ ಮತದಾರರೆ ಇವರನ್ನು ಸಂತೈಸಿ, ಸಮಾಧನ ಮಾಡಿದರು.
ದಯವಿಟ್ಟು ಕ್ಷಮಿಸಿಬಿಡಿ..
ಕಣ್ಣೀರು ಹಾಕುತ್ತಲೇ ಮತದಾರರತ್ತ ಕೈ ಮುಗಿದು ನಿಂತ ಅಭ್ಯರ್ಥಿ ಮಂಜಳಾ ಶ್ರೀನಿವಾಸ್, ದಯವಿಟ್ಟು ತಮ್ಮನ್ನು ಕ್ಷಮಿಸಿಬಿಡಿ. ಇದು ತಮ್ಮಿಂದ ಆದ ತಪ್ಪಲ್ಲ. ಚುನಾವಣಾಧಿಕಾರಿಗಳಿಂದ ಆದ ತಪ್ಪು ಎಂದು ಕಣ್ಣೀರಾದರು.
ಮತಗಟ್ಟೆ ಹೊರಗೆ ಕಿರಿಕ್
ಮತದಾನ ಸ್ಥಗಿತಗೊಳ್ಳುತ್ತಿದ್ದಂತೆ ಇಬ್ಬರು ಅಭ್ಯರ್ಥಿಗಳ ನಡುವೆ ಕಿರಿಕ್ ಆಗಿದೆ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಪೊಲೀಸರು ಮತ್ತು ಸಮಾಜದ ಹಿರಿಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ಶಿಕಾರಿಪುರದಿಂದ ಸಾಲು ಸಾಲು ಬಸ್
ಶಿಕಾರಿಪುರ ತಾಲೂಕಿನಲ್ಲಿ ಸುಮಾರು 2 ಸಾವಿರ ಮತಗಳಿವೆ. ಮತಗಟ್ಟೆಗೆ ತೆರಳಲು ಸುಮಾರು 40 ಬಸ್ಸುಗಳನ್ನು ರೆಡಿ ಮಾಡಲಾಗಿತ್ತು. ಆದರೆ ಬ್ಯಾಲೆಟ್ ಪೇಪರ್ ಗೊಂದಲದಿಂದಾಗಿ ಮತದಾರರು ಶಿಕಾರಿಪುರದಲ್ಲೇ ಕಾದು ಕೂರುವಂತಾಗಿತ್ತು. ಮತದಾನ ರದ್ದುಗೊಳಿಸಿದ ವಿಚಾರ ತಿಳಿದ ಬಳಕ ಅವರು ಮನೆಗೆ ಹಿಂತಿರುಗಿದ್ದಾರೆ.
ಫ್ಲೆಕ್ಸ್ ಬಿಚ್ಚಿದ ಬೆಂಬಲಿಗರು
ಮತದಾನ ರದ್ದುಗೊಳ್ಳುತ್ತಿದ್ದಂತೆ, ಅಭ್ಯರ್ಥಿಗಳು ಮತ್ತೊಂದು ಸುತ್ತಿನ ಪ್ರಚಾರಕ್ಕೆ ಅಣಿಯಾಗಬೇಕಿದೆ. ಹಾಗಾಗಿ ಮತಗಟ್ಟೆ ಸಮೀಪದಲ್ಲಿ ಅಭ್ಯರ್ಥಿಗಳು ಹಾಕಿಸಿದ್ದ ಫೆಕ್ಸ್’ಗಳು ತೆರವು ಸೇಫಾಗಿ ಬಿಚ್ಚಿ ಪಕ್ಕಕ್ಕೆ ಇಡಲಾಯಿತು.
ಎರಡನೆ ಬಾರಿ ಮುಂದೂಡಿಕೆ
ಕುರುಬರ ಸಂಘದ ನಿರ್ದೇಶಕರ ಸ್ಥಾನಕ್ಕೆ ಇದು ಎರಡನೇ ಬಾರಿಗೆ ಚುನಾವಣೆ ಮುಂದೂಡಿಕೆಯಾಗಿದೆ. ಈ ಮೊದಲು ಚುನಾವಣೆ ಘೋಷಣೆಯಾಗಿ ಮುಂದೂಡಿಕೆಯಾಗಿತ್ತು. ಈಗ ಮತದಾನದ ದಿನವೇ ಗೊಂದಲದಿಂದಾಗಿ ಚುನಾವಣೆ ಮುಂದೂಡಲಾಗಿದೆ. ಇದರು ಮತದಾರರು ಮತ್ತು ಅಭ್ಯರ್ಥಿಗಳು ಹೈರಾಣಾಗಿಸಿದೆ. ಚುನಾವಣಾಧಿಕಾರಿಗಳ ವಿರುದ್ಧ ಎಲ್ಲರು ಹಿಡಿಶಾಪ ಹಾಕುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
