ಶಿವಮೊಗ್ಗ ಲೈವ್.ಕಾಂ | SHIMOGA | 7 ಫೆಬ್ರವರಿ 2020
ಆಯನೂರು ಸಮೀಪದ ಕೊನಗವಳ್ಳಿಯಲ್ಲಿ ರೈಲು ಹಳಿ ಪಕ್ಕದಲ್ಲಿ ಏಳರಿಂದ ಎಂಟು ವರ್ಷದ ಗಂಡು ಚಿರತೆಯ ಮೃತದೇಹ ಗುರುವಾರ ಪತ್ತೆಯಾಗಿದ್ದು, ರಾತ್ರಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊನಗವಳ್ಳಿ ಸರ್ವೇ ನಂ.56ರ ಸಿದ್ಧಿಪುರ ಮೈನರ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ರೈಲ್ವೆ ಸಿಬ್ಬಂದಿ, ಟ್ರಾಕ್ಮನ್ ಹಾಗೂ ಕೀಮನ್’ಗಳು ಚಿರತೆ ಸತ್ತು ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಚಿರತೆ ದೇಹ ಉಬ್ಬಿಕೊಂಡು ಸ್ವಲ್ಪ ವಾಸನೆ ಬರುತ್ತಿತ್ತು. ತಲೆಗೆ ತೀವ್ರವಾದ ಪೆಟ್ಟು ಬಿದ್ದಿರುವುದೇ ಚಿರತೆ ಸಾವಿಗೆ ಕಾರಣವಾಗಿದೆ.
ಆಯನೂರು ವಲಯ ಅರಣ್ಯಾಧಿಕಾರಿ ಕೆ. ರವಿ ಹಾಗೂ ಶಂಕರ ವಲಯ ಅರಣ್ಯಾಧಿಕಾರಿ ಜಯೇಶ್, ಉಪ ಅರಣ್ಯಾಧಿಕಾರಿಗಳಾದ ಕುಮಾರ್, ಮಂಜುನಾಥ, ಪುಟ್ಟಸ್ವಾಮಿ ಹಾಗೂ ಇಪ್ಲಿಕಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಡಾ. ವಿನಯ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಟ್ಟು ಹಾಕಲಾಯಿತು.
ಚಿರತೆಯ ಉಗುರು ಹಾಗೂ ಚರ್ಮಕ್ಕೆ ಯಾವುದೇ ಹಾನಿ ಆಗಿಲ್ಲ, ಹೀಗಾಗಿ ಇದು ಮಾನವ ಕೃತ್ಯವಲ್ಲ. ಮೇಲಾಗಿ ಈ ಭಾಗದಲ್ಲಿ ಚಿರತೆ ಇದೇ ಎಂದು ಜನರಿಗೇ ಗೊತ್ತಿಲ್ಲ. ಕಾಡು ನಶಿಸುತ್ತಿರುವುದರಿಂದ ಕಾಡು ಪ್ರಾಣಿಗಳು ನೀರು ಹಾಗೂ ಆಹಾರ ಹುಡುಕಿಕೊಂಡು ಊರಿಗೆ
ಬರುತ್ತಿರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂದು ಶಂಕರ ವಲಯ ಅರಣ್ಯಾಧಿಕಾರಿ ಜಯೇಶ್ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]