ಶಿವಮೊಗ್ಗ ಲೈವ್.ಕಾಂ | SHIMOGA | 15 ಮಾರ್ಚ್ 2020
ಕರೋನ ವೈರಸ್ ಹರಡದಂತೆ ತಡೆಯಲು ರಾಜ್ಯ ಸರ್ಕಾರ ರಾಜ್ಯಾದ್ಯಂತ ಒಂದು ವಾರ ಕೆಲ ನಿರ್ಬಂಧಗಳನ್ನು ಹೇರಿದೆ. ಇದರ ಪರಿಣಾಮ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇನ್ನು, ಬಸ್ ನಿಲ್ದಾಣಕ್ಕೆ ಬರುತ್ತಿರುವ ಕೆಲವೇ ಪ್ರಯಾಣಿಕರು ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ.

ಬಸ್ ನಿಲ್ದಾಣ ಖಾಲಿ ಖಾಲಿ
ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕೆಲವೇ ಕಲವು ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯುತ್ತಿದ್ದಾರೆ. ಹೀಗೆ ಬರುತ್ತಿರುವ ಪ್ರಯಾಣಿಕರಲ್ಲಿ ಬಹುತೇಕರು ಮಾಸ್ಕ್ ಧರಿಸಿ, ಮುಂಜಾಗ್ರತೆ ವಹಿಸುತ್ತಿದ್ದಾರೆ.
ಬಸ್ಸಿನಲ್ಲಿ ಜನರೇ ಇಲ್ಲ
ವಿವಿಧೆಡೆಯಿಂದ ಶಿವಮೊಗ್ಗಕ್ಕೆ ಬರುತ್ತಿರುವ ಮತ್ತು ಶಿವಮೊಗ್ಗದಿಂದ ವಿವಿಧೆಡೆ ತೆರಳುತ್ತಿರುವ ಬಸ್ಸುಗಳಲ್ಲಿ ಪ್ರಯಾಣಿಕರೆ ಕಾಣಸಿಗುತ್ತಿಲ್ಲ. ಬಹುತೇಕ ಬಸ್ಸುಗಳು ಖಾಲಿ ಖಾಲಿಯಾಗಿವೆ. ಶನಿವಾರ ರಾತ್ರಿ ವೇಳೆಗೆ ಪ್ರಯಾಣಿಕರ ಸಂಖ್ಯೆ ಸುಧಾರಿಸಿತ್ತು. ಆದರೆ ಭಾನುವಾರ ಬೆಳಗ್ಗೆ ಮತ್ತೆ ಪ್ರಯಾಣಿಕರೆ ಕಾಣಸಿಗದಾಗಿದ್ದಾರೆ.

ಎಸಿ ಬಸ್ಸಿಗೆ ಕುಸಿದ ಡಿಮಾಂಡ್
ವೀಕೆಂಡ್’ಗಳಲ್ಲಿ ಐರಾವತ ಎಸಿ ಬಸ್ಸುಗಳಿಗೆ ಭಾರಿ ಡಿಮಾಂಡ್ ಇರುತ್ತಿತ್ತು. ಆದರೆ ಕರೋನ ಭೀತಿ ಹಿನ್ನೆಲೆ, ಎಸಿ ಬಸ್ಸುಗಳ ಮುಂಗಡ ಬುಕ್ಕಿಂಗ್ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ಶಿವಮೊಗ್ಗದಿಂದ 30ಕ್ಕೂ ಹೆಚ್ಚು ಸರ್ಕಾರಿ ಎಸಿ ಬಸ್ಸುಗಳು ವಿವಿಧೆಡೆ ಸಂಚರಿಸುತ್ತವೆ. ಆದರೆ ಇವುಗಳಲ್ಲಿ ಜನ ಸಂಚಾರ ಗಣನೀಯವಾಗಿ ತಗ್ಗಿದೆ.

ಸಿಬ್ಬಂದಿಗಳಿಗು ಮಾಸ್ಕ್
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ KSRTC ಸಿಬ್ಬಂದಿಗಳು ಮಾಸ್ಕ್ ತೊಟ್ಟು ಕೆಲಸ ನಿರ್ಹವಹಿಸುತ್ತಿದ್ದಾರೆ. ಬಸ್ ನಿಲ್ದಾಣದ ಎನ್’ಕ್ವಯರಿ, ಚಾಲಕರು, ನಿರ್ವಾಹಕರು ಸೇರಿದಂತೆ ನಿಲ್ದಾಣದ ಪ್ರತಿ ಸಿಬ್ಬಂದಿಯು ಮಾಸ್ಕ್ ತೊಟ್ಟಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]