ಶಿವಮೊಗ್ಗ ಲೈವ್.ಕಾಂ | SAGARA NEWS | 20 ನವೆಂಬರ್ 2021
ರಸ್ತೆ ದಾಟಲು ಮುಂದಾಗಿದ್ದ ಯುವತಿಯರಿಗೆ ಗೂಡ್ಸ್ ಆಟೋವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಯುವತಿಯರಿಗೆ ಗಂಭೀರ ಗಾಯವಾಗಿದೆ. ಈ ದೃಶ್ಯ ಸಮೀಪದ ಶೋ ರೂಂ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಗರ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸಮ್ರೀನ್ ಬಾನು (21) ಮತ್ತು ಆಫ್ರೀನ್ ಬಾನು (19) ಗಾಯಗೊಂಡಿದ್ದಾರೆ. ಇಬ್ಬರು ಸಾಗರದ ಎಸ್.ಎನ್.ರಸ್ತೆಯ ನಿವಾಸಿಗಳಾಗಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ಹೊಲಿಗೆ ತರಬೇತಿ ಮುಗಿಸಿ ಸಹೋದರಿಯರು ಮನೆಗೆ ಮರಳುತ್ತಿದ್ದರು. ಇಂದಿರಾಗಾಂಧಿ ಕಾಲೇಜು ತಿರುವಿನಲ್ಲಿ ಯುವತಿಯರು ಬಿ.ಹೆಚ್.ರಸ್ತೆ ದಾಟಲು ಅಣಿಯಾಗುತ್ತಿದ್ದರು. ಈ ವೇಳೆ ಬಿ.ಹೆಚ್.ರಸ್ತೆಯಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯುವತಿಯರಿಗೆ ಗಂಭೀರ ಗಾಯವಾಗಿದೆ. ನಂತರ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿಯಾಗಿದ್ದು, ಕಂಬ ಮುರಿದು ಹೋಗಿದೆ.
ಬೈಕ್ ತಪ್ಪಿಸಲು ಹೋಗಿ ಘಟನೆ
ಇಂದಿರಾ ಗಾಂಧಿ ಕಾಲೇಜು ರಸ್ತೆಯಿಂದ ಬಿ.ಹೆಚ್.ರಸ್ತೆಗೆ ಹೋದ ದ್ವಿಚಕ್ರ ವಾಹನಕ್ಕೆ ಆಟೋ ಡಿಕ್ಕಿಯಾಗಬೇಕಿತ್ತು. ಆದರೆ ಬೈಕ್’ಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ಮತ್ತೊಂದು ಕಡೆಗೆ ಆಟೋ ತಿರುಗಿಸಿದ್ದರಿಂದ ಯುವತಿಯರಿಗೆ ಡಿಕ್ಕಿಯಾಗಿದೆ. ಈ ದೃಶ್ಯವು ಸಮೀಪದ ಕಾರು ಶೋರೂಂ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೇಗಿದೆ ಯುವತಿಯರ ಸ್ಥಿತಿ?
ಗಾಯಗೊಂಡ ಯುವತಿಯರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಮ್ರೀನ್ ಬಾನು ಸೊಂಟ ಸೇರಿದಂತೆ ವಿವಿಧೆಡೆ ಪೆಟ್ಟು ಬಿದ್ದಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಫ್ರೀನ್ ಬಾನು ಅವರಿಗೂ ಭಾರಿ ಪೆಟ್ಟು ಬಿದ್ದಿದೆ. ಸಹೋದರಿಯರಿಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.
ಅಸಹಾಯಕ ಸ್ಥಿತಿಯಲ್ಲಿ ಬಡ ಕುಟುಂಬ
ಸಮ್ರೀನ್ ಮತ್ತು ಆಫ್ರೀನ್ ಅವರ ತಂದೆ ಮಕ್ಬೂಲ್ ಸಾಬ್ ಸಾಗರದಲ್ಲಿ ಸಣ್ಣ ಮೀನು ವ್ಯಾಪಾರಿಯಾಗಿದ್ದಾರೆ. ಈಗ ಇಬ್ಬರು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದು, ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇನ್ನು, ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಸಾರ್ವಜನಿಕರು ಕುಟುಂಬಕ್ಕೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಚಾಲಕನ ವಿರುದ್ಧ ಪ್ರಕರಣ
ಇನ್ನು, ಘಟನೆ ಸಂಬಂಧ ಗೂಡ್ಸ್ ಆಟೋ ಚಾಲಕ ಪವನ್ ವಿರುದ್ಧ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200