ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಡಿಸೆಂಬರ್ 2021
ಟಿಪ್ಪರ್ ಲಾರಿ ಮತ್ತು ಟೆಂಪೊ ಟ್ರಾವಲರ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟಿಪ್ಪರ್ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಸ್ವಲ್ಪ ಯಾಮಾರಿದ್ದರೂ ದೊಡ್ಡ ಮಟ್ಟದ ಸಾವು, ನೋವು ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದಂತಾಗಿದೆ.
ಹಿಂಬದಿಯಿಂದ ಬಂದು ಡಿಕ್ಕಿ
ಹರಿಗೆ ಕಡೆಯಿಂದ ಬರುತ್ತಿದ್ದ ಟೆಂಪೊ ಟ್ರಾವಲರ್ ವಾಹನ ಶಿವಮೊಗ್ಗದ ಎಂ.ಅರ್.ಎಸ್ ಬಳಿ ಇರುವ ಹಂಪ್’ನಲ್ಲಿ ನಿಧಾನವಾಗಿದೆ. ಇದೆ ಮಾರ್ಗದಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿ, ಟೆಂಪೊ ಟ್ರಾವಲರ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿವೈಡರ್ ಹಾರಿದ ವಾಹನಗಳು
ಅಪಘಾತದ ರಭಸಕ್ಕೆ ಟೆಂಪೊ ಟ್ರಾವಲರ್ ಮತ್ತು ಟಿಪ್ಪರ್ ಲಾರಿ ರಸ್ತೆ ವಿಭಜಕವನ್ನು ಹಾರಿ ಪಕ್ಕದ ರಸ್ತೆಗೆ ಬಂದಿವೆ. ಟೆಂಪೊ ಟ್ರಾವರ್ ವಾಹನ ಡಿವೈಡರ್ ಮೇಲಿನ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಟಿಪ್ಪರ್ ಲಾರಿ ಪಕ್ಕದ ರಸ್ತೆ ದಾಟಿ, ಕೆಪಿಟಿಸಿಎಲ್ ನೌಕರರ ಕ್ವಾರ್ಟರ್ಸ್’ನ ಕಾಂಪೌಂಡ್’ಗೆ ಡಿಕ್ಕಿಯಾಗಿದೆ.
ಟಿಪ್ಪರ್ ಚಾಲಕನಿಗೆ ಗಾಯ
ಅಪಘಾತದಲ್ಲಿ ಟೆಂಪೊ ಟ್ರಾವಲರ್ ವಾಹನ ಹಿಂಭಾಗಕ್ಕೆ ಹಾನಿಯಾಗಿದೆ. ಲೈಟ್ ಕಂಬಕ್ಕೆ ಗುದ್ದಿದ್ದರಿಂದ ಮುಂಭಾಗ ನುಜ್ಜುಗುಜ್ಜಾಗಿದೆ. ಚಾಲಕನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದೆ. ಇನ್ನು, ಕಾಂಪೌಂಡ್’ಗೆ ಗುದ್ದಿದ್ದರಿಂದ ಟಿಪ್ಪರ್ ಲಾರಿ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಲಾರಿ ಚಾಲಕನಿಗೆ ಗಾಯವಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ತಪ್ಪಿದ ಭಾರಿ ಅನಾಹುತ
ಬೆಳಗಿನ ಹೊತ್ತು ಭದ್ರಾವತಿ ಕಡೆಗೆ ಹೆಚ್ಚು ವಾಹನಗಳು ಸಂಚರಿಸುತ್ತವೆ. ಅದೃಷ್ಟವಶಾತ್ ಅಪಘಾತ ಸಂಭವಿಸಿದ ಸಂದರ್ಭ ಯಾವುದೆ ವಾಹನಗಳು ಎಂ.ಆರ್.ಎಸ್ ಸರ್ಕಲ್ ಕಡೆಯಿಂದ ಭದ್ರಾವತಿ ಕಡೆಗೆ ತೆರಳುತ್ತಿರಲಿಲ್ಲ. ಒಂದು ವೇಳೆ ಅಪಘಾತವಾದಾಗ ಎದುರಿನಿಂದ ಯಾವುದೆ ವಾಹನ ಬಂದಿದ್ದರೂ ಅಪಘಾತದ ಸ್ವರೂಪದ ಬದಲಾಗುತಿತ್ತು. ಸಾವು, ನೋವಿನ ಸಾಧ್ಯತೆ ಇತ್ತು ಅನ್ನುತ್ತಾರೆ ಸ್ಥಳೀಯರು.
ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200