ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021
ಇತ್ತೀಚೆಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ಹೇಳಿಕೊಂಡು ಉದ್ಯಮಿಗಳಿಂದ ಹಣ ವಸೂಲಿ ಮಾಡಿದ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಗೃಹ ಸಚಿವರ ಹೆಸರು ಹೇಳಿಕೊಂಡು ಹಣ ಸುಲಿಗೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ಭವಾನಿ ರಾವ್ ಮೋರೆ ಬಂಧಿತ. ಈತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರು ಹೇಳಿಕೊಂಡು ಡಾನ್ಸ್ ಬಾರ್ ಮಾಲೀಕರಿಂದ 1.25 ಕೋಟಿ ರೂ. ಪಡೆದಿದ್ದ ಎಂದು ಆರೋಪಿಸಲಾಗಿದೆ.
ಏನಿದು ಪ್ರಕರಣ?
ರಾಜ್ಯ ಬಾರ್ ಮತ್ತು ರೆಸ್ಟೋರೆಂಟ್ ಓನರ್ಸ್ ವುಮೆನ್ ಎಂಪ್ಲಾಯೀಸ್ ಸರ್ವಿಸ್ ಅಸೋಸಿಯೇಷನ್ ಕಾರ್ಯದರ್ಶಿಯನ್ನು ಭವಾನಿ ರಾವ್ ಮೋರೆ ಭೇಟಿಯಾಗಿದ್ದಾನೆ. ‘ಲೇಡಿಸ್ ಬಾರ್’ಗಳಿಗೆ ಸರ್ಕಾರ ಮತ್ತು ಪೊಲೀಸರಿಂದ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಗೃಹ ಸಚಿವರು ತನಗೆ ಪರಿಚಿತರು. ಇದಕ್ಕಾಗಿ 1.25 ಕೋಟಿ ರೂ. ಹಣ ಕೊಡಬೇಕು. ಇಲ್ಲವಾದಲ್ಲಿ ಬಾರ್’ಗಳನ್ನು ಶಾಶ್ವತವಾಗಿ ಮುಚ್ಚಿಸುವುದಾಗಿ’ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ಹಣ ಪಡೆದ ಭವಾನಿ ರಾವ್ ಮೋರೆ ನಂತರ ಸರಿಯಾಗಿ ಸ್ಪಂದಿಸಿಲ್ಲ. ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದರಿಂದ ಒಂದು ಕೋಟಿ ರೂ. ಹಣ ಮರಳಿಸಿದ್ದಾನೆ. 25 ಲಕ್ಷ ರೂ. ಹಿಂತಿರುಗಿಸುವಂತೆ ಕೇಳಿದಾಗ ಬೆದರಿಕೆ ಒಡ್ಡಿದ್ದಾನೆ ಎಂದು ಸುರೇಶ್ ಎಂಬುವವರು ದೂರಿನಲ್ಲಿ ತಿಳಿಸಿದ್ದರು.
ಬೆಂಗಳೂರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ಪೊಲೀಸರು ಶಿವಮೊಗ್ಗದಲ್ಲಿ ಭವಾನಿ ರಾವ್ ಮೋರೆಯನ್ನು ಬಂಧಿಸಿದ್ದಾರೆ.
‘ಸಚಿವರ ಗೊತ್ತು’ ಅನ್ನೋರ ಬಗ್ಗೆ ಇರಲಿ ಎಚ್ಚರ
ಸಚಿವರ ಹೆಸರುಗಳನ್ನು ಹೇಳಿಕೊಂಡು ವಂಚನೆ ಪ್ರಕರಣ ದಾಖಲಾಗುತ್ತಿರುವುದು ಇದೆ ಮೊದಲಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ಹೇಳಕೊಂಡು ಇಬ್ಬರು ಉದ್ಯಮಿಗಳಿಂದ ಶಿವಮೊಗ್ಗದಲ್ಲಿ ಗುಂಪೊಂದು ಹಣ ವಸೂಲಿ ಮಾಡಿತ್ತು. ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಬಿಜೆಪಿ ಕಾರ್ಯಕರ್ತನ ಬಂಧನವಾಗಿದೆ.
ಇದನ್ನೂ ಓದಿ | ಸಚಿವ ಈಶ್ವರಪ್ಪ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ ಆರೋಪ, ಶಿವಮೊಗ್ಗದಲ್ಲಿ ಐವರ ವಿರುದ್ಧ ಕೇಸ್
ಸಚಿವರು, ಶಾಸಕರು ಅಕ್ಕಪಕ್ಕದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಇದನ್ನೆ ಜನರಿಗೆ, ಉದ್ಯಮಿಗಳಿಗೆ ತೋರಿಸಿ, ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಾರೆ. ಇಂತಹ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.