ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಜನವರಿ 2022
ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಸಿದೆ. ಘಟನೆಯಲ್ಲಿ ಮೂರು ಕಾರು ಸುಟ್ಟು ಕರಕಲಾಗಿವೆ. ಬಸ್ ಒಂದಕ್ಕೆ ಭಾಗಶಃ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೊಡ್ಡ ಅವಘಡ ತಪ್ಪಿಸಿದ್ದಾರೆ.
ಆಟೋ ಕಾಂಪ್ಲೆಕ್ಸ್ ಮೊದಲ ತಿರುವಿನಲ್ಲಿ ನಿಲ್ಲಿಸಿದ್ದ ಕಾರುಗಳು, ಬಸ್ಸಿಗೆ ಬೆಂಕಿ ಹೊತ್ತುಕೊಂಡು ಉರಿದಿದೆ. ಮೂರು ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ.
ರಸ್ತೆ ಪಕ್ಕ ನಿಂತಿದ್ದ ಕಾರುಗಳು
ರಾತ್ರಿ ಆಟೋ ಕಾಂಪ್ಲೆಕ್ಸ್’ನಲ್ಲಿ ನಿಂತಿದ್ದ ಕಾರುಗಳಿಗೆ ಬೆಂಕಿ ಹೊತ್ತುಕೊಂಡಿದೆ. ಕೆಲವೇ ನಿಮಿಷದಲ್ಲಿ ಬೆಂಕಿಯ ಕೆನ್ನಾಲಗೆಗೆ ಕಾರುಗಳು ಸುಟ್ಟು ಹೋಗಿವೆ. ಪಕ್ಕದಲ್ಲಿ ನಿಂತಿದ್ದ ಬಸ್ಸಿಗೂ ಬೆಂಕಿ ವ್ಯಾಪಿಸಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್’ಗೂ ಬೆಂಕಿ ತಗುಲುವುದರಲ್ಲಿತ್ತು. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಬೆಂಕಿ ಹೊತ್ತುಕೊಳ್ಳಲು ಕಾರಣವೇನು?
ಕಾರುಗಳು, ಬಸ್ಸು ನಿಲ್ಲಿಸಿದ್ದ ರಸ್ತೆ ಪಕ್ಕದಲ್ಲಿ ಕಸದ ರಾಶಿ ಇದೆ. ಈ ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಅಥವಾ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿರುವ ಬಗ್ಗೆ ಶಂಕೆ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ. ಕಸದಿಂದ ಹಬ್ಬಿದ ಬೆಂಕಿ ಕಾರುಗಳು, ಬಸ್ಸನ್ನು ಆಹುತಿ ಪಡೆದಿದೆ. ಭಾನುವಾರ ರಾತ್ರಿ ಆದ್ದರಿಂದ ಆಟೋ ಕಾಂಪ್ಲೆಕ್ಸ್ ಬಳಿ ಜನ ಸಂಚಾರ ಕಡಿಮೆ ಇತ್ತು. ಆದ್ದರಿಂದ ಬೆಂಕಿ ಹೊತ್ತುಕೊಂಡ ವಿಚಾರ ಗೊತ್ತಾಗುವುದು ತಡವಾಗಿದೆ.
ಬೆಂಕಿ ಜೋರಾಗುತ್ತಿದ್ದಂತೆ ಸ್ಥಳೀಯರು ಗಮನಿಸಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಜನರ ಆತಂಕ ದೂರ ಮಾಡಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಪೊರೇಟರ್ ರಾಹುಲ್ ಬಿದರೆ ಸೇರಿದಂತೆ ಸ್ಥಳೀಯರು ಕಾರ್ಯಾಚರಣೆಗೆ ನೆರವಾದರು.
ವಿನೋಬಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.