SHIVAMOGGA LIVE NEWS | CORPORATOR | 24 ಮೇ 2022
ಶಿವಮೊಗ್ಗದಲ್ಲಿ ಭಾರಿ ಮಳೆ ಬಂದ ಸಂದರ್ಭ ನೆರವಿಗೆ ಬಾರದ ಕಾರ್ಪೊರೇಟರ್ ವಿರುದ್ಧ ಯುವಕರ ಗುಂಪು ಆಕ್ರೋಶ ವ್ಯಕ್ತಪಡಿಸಿತ್ತು. ಅವರ ಮನೆ ಬಳಿಗೆ ತೆರಳಿ ಪ್ರಶ್ನೆ ಮಾಡಿತ್ತು. ಇದರ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾರ್ಪೊರೇಟರ್ ರಾಜು ಅವರು SDPI ಸಂಘಟನೆಯ 25 ರಿಂದ 30 ಕಾರ್ಯಕರ್ತರು ತಮ್ಮ ಮನೆಗೆ ನುಗ್ಗಿ ಕೂಗಾಡಿದ್ದಾರೆ. ಘಟನೆ ಸಂಬಂಧ ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿ ಪ್ರಕರಣ ದಾಖಲು ಮಾಡುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?
ಮೇ 19ರಂದು ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಸುರಿದು ಆರ್.ಎಂ.ಎಲ್ ನಗರದ ಕೆಲ ಭಾಗ ಜಲಾವೃತವಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದರು. ಇಷ್ಟು ಹಾನಿ ಉಂಟಾಗಿದ್ದರು 28ನೇ ವಾರ್ಡ್ ಕಾರ್ಪೊರೇಟರ್ ರಾಜು ಅವರು ಮನೆ ಬಿಟ್ಟು ಹೊರಗೆ ಬಂದಿಲ್ಲ ಎಂದು ಯುವಕರ ಗುಂಪೊಂದು ಆಕ್ರೋಶ ವ್ಯಕ್ತಪಡಿಸಿತ್ತು. ಕಾರ್ಪೊರೇಟರ್ ಮನೆ ಬಳಿಗೆ ಹೋಗಿ ಪ್ರಶ್ನಿಸಿದ್ದರು.
ವಿಡಿಯೋ ವೈರಲ್
ಮನೆ ಬಳಿ ತೆರಳಿದ್ದ ಯುವಕರ ಗುಂಪು ಕಾರ್ಪೊರೇಟರ್ ರಾಜು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭ ಕಾರ್ಪೊರೇಟರ್ ರಾಜು ಮತ್ತು ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಯುವಕರು ಅವಾಚ್ಯ ಪದಗಳ ಬಳಕೆ ಮಾಡಿದ್ದರಿಂದ ಕಾರ್ಪೊರೇಟರ್ ರಾಜು ಅವರ ಪತ್ನಿ ಮಧ್ಯ ಪ್ರವೇಶಿಸಿ ಯುವಕರ ಜೊತೆ ಮಾತಿಗೆ ಮಾತು ಬೆಳೆಸಿದ್ದರು. ಇದೆಲ್ಲದರ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಯುವಕರ ವಿರುದ್ಧ ಕೇಸ್
ಘಟನೆ ಬಳಿಕ ಕಾರ್ಪೊರೇಟರ್ ರಾಜು ಅವರು ಬಿಜೆಪಿ ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ. SDPI ಸಂಘಟನೆಗೆ ಸೇರಿದ 25 – 30 ಯುವಕರು ತಮ್ಮ ಮನೆ ಬಳಿಗೆ ಬಂದು ಗಲಾಟೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
‘ತಮಗೆ ಆರೋಗ್ಯ ಸರಿ ಇಲ್ಲದ ಕಾರಣ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಮೇ 19ರಂದು ಮಧ್ಯಾಹ್ನ 2.30ರ ಹೊತ್ತಿಗೆ 25 – 30 ಯುವಕರ ಗುಂಪು ಮನೆ ಕಾಂಪೌಂಡ್ ಒಳಗೆ ಬಂದು ಕೂಗಾಡುತ್ತಿದ್ದರು. ತಾವು ಹೊರಗೆ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮ್ಮ ಪತ್ನಿಯ ವೇಲನ್ನು ಎಳೆದಿದ್ದಾರೆ. ನಿನ್ನ ಗಂಡನ್ನನು ಸಾಯಿಸು ಎಂದು ತಮ್ಮ ಪತ್ನಿಗೆ ಹೇಳಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ’ ಎಂದು ಕಾರ್ಪೊರೇಟರ್ ರಾಜು ದೂರಿನಲ್ಲಿ ತಿಳಿಸಿದ್ದಾರೆ.
ಚರ್ಚೆಗೆ ಕಾರಣವಾದ ಘಟನೆ
ಯುವಕರ ಗುಂಪೊಂದು ಕಾರ್ಪೊರೇಟರ್ ಮನೆಗೆ ಮುತ್ತಿಗೆ ಹಾಕಿದ್ದ ಪ್ರಕರಣ ಗಂಭೀರ ಚರ್ಚೆ ಹುಟ್ಟುಹಾಕಿತ್ತು. ಮತ ನೀಡಿದ ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಇದೆ ರೀತಿ ಪ್ರತಿಭಟನೆ ನಡೆಸಬೇಕು ಎಂಬ ವಾದ ಹುಟ್ಟಿತ್ತು. ಅಲ್ಲದೆ ಈ ರೀತಿ ಮನೆಗೆ ನುಗ್ಗುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶವು ವ್ಯಕ್ತವಾಗಿದೆ. ಇವೆಲ್ಲದರ ಮಧ್ಯೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ದಿನ 150ಕ್ಕೂ ಹೆಚ್ಚು ಜನರನ್ನು ಕಾಪಾಡಿದ ‘ಆಪತ್ಭಾಂಧವರು’, ಯಾರದು?
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.