ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಡಿಸೆಂಬರ್ 2021
ರಸ್ತೆ ಅಗಲೀಕರಣ ವೇಳೆ ನಾಗರಹಾವೊಂದನ್ನು ಸಾಯಿಸಿದ ಆರೋಪದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಇಂಜಿನಿಯರ್’ಗಳ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳಾದ ಕೆ.ವಿ.ವಿಜಯಕುಮಾರ್, ರಾಜಕುಮಾರ್ ಮತ್ತು ಸಿಬ್ಬಂದಿ ನಾಗಪ್ಪ ಎಂಬುವವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಕಳೆದ ಭಾನುವಾರ ಸಾಗರ ರಸ್ತೆಯ ಎಪಿಎಂಸಿ ಬಳಿ ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ಆಂಜನೇಯ ದೇವಸ್ಥಾನ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ದೇವಸ್ಥಾನದ ಬಳಿ ನಾಗರ ಹಾವು ಕಾಣಿಸಿಕೊಂಡಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಜೆಸಿಬಿ ಬಳಸಿ ಚಾಲಕ ನಾಗಪ್ಪ ಹಾವನ್ನು ಸಾಸಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಾವು ಹಿಡಿಸಬಹುದಿತ್ತು
ನಾಗರ ಹಾವು ಪ್ರತ್ಯಕ್ಷವಾದಾಗ ಅದನ್ನು ಹಿಡಿಸಬಹುದಿತ್ತು. ಉರಗ ತಜ್ಞರನ್ನು ಕರೆಯಿಸಿ ಹಾವು ಹಿಡಿಸಿ, ಅರಣ್ಯ ವ್ಯಾಪ್ತಿಯಲ್ಲಿ ಬಿಡಬಹುದಿತ್ತು. ಆದರೆ ಅಧಿಕಾರಿಗಳು ಜೆಸಿಬಿ ಬಳಸಿ ಹಾವನ್ನು ಸಾಯಿಸಿದ್ದಾರೆ. ಬೇಕಂತಲೇ ಈ ಕೃತ್ಯ ಎಸಗಿದ್ದಾರೆ ಎಂದು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲು
ನಾಗರ ಹಾವು ಸಾವಿಗೆ ಕಾರಣರಾದ ಆರೋಪದ ಮೇಲೆ ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳು, ಜೆಸಿಬಿ ಚಾಲಕನ ವಿರುದ್ಧ ಶಂಕರ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮೂವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ.