SHIVAMOGGA LIVE NEWS | 13 MARCH 2024
SHIMOGA : ವ್ಯಕ್ತಿಯೊಬ್ಬರಿಂದ ಐದು ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜಿ.ಮಹಾಲಿಂಗಪ್ಪ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಏನಿದು ಕೇಸ್?
2023ರ ಸೆ.25ರಂದು ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ 15ನೇ ಮೈಲಿ ಬಳಿ ಶಾರ್ಟ್ ಸರ್ಕಿಟ್ನಿಂದ ಕಾರೊಂದು ಅಗ್ನಿಗಾಹುತಿಯಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರು. ಘಟನೆ ಕುರಿತು ಕಾರು ಮಾಲೀಕ ಗೋಪಿಶೆಟ್ಟಿಕೊಪ್ಪದ ಇರ್ಷಾದ್ ಮಾಳೂರು ಠಾಣೆಯಲ್ಲಿ ದೂರು ನೀಡಿದ್ದರು. ಯುನೈಟೆಡ್ ಇನ್ಷುರೆನ್ಸ್ ಕಂಪನಿಯಲ್ಲಿ ಕಾರಿನ ವಿಮೆ ಮಾಡಿಸಿದ್ದರಿಂದ ಅದನ್ನು ಕ್ಲೇಮ್ ಮಾಡಲು ಅಗ್ನಿಶಾಮಕ ದಳದಿಂದ ಫೈರ್ ರಿಪೋರ್ಟ್ ಅಗತ್ಯವಿತ್ತು. ಇದನ್ನು ಕೇಳಲು ಹೋದಾಗ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೊದಲಿಗೆ ಚಲನ್ ಕಟ್ಟಿದ್ದರು
ಇರ್ಷಾದ್ ಮೊದಲಿಗೆ ಅಗ್ನಿಶಾಮಕ ದಳ ಕಚೇರಿಗೆ ತೆರಳಿದ್ದಾಗ ಎಸ್ಬಿಐ ಬ್ಯಾಂಕಿನಲ್ಲಿ 4 ಸಾವಿರ ರೂ. ಚಲನ್ ಕಟ್ಟಬೇಕು, ತನ್ನ ಕಾರು ಆಕಸ್ಮಿಕವಾಗಿ ಅಗ್ನಿಗಾಹುತಿ ಆಗಿದೆ ಎಂದು ಬಾಂಡ್ ಪೇಪರ್ನಲ್ಲಿ ಪ್ರಮಾಣ ಪತ್ರ ಮಾಡಿಸಬೇಕು ಎಂದು ತಿಳಿಸಲಾಗಿತ್ತು. ಇದನ್ನು ಮಾಡಿಸಿಕೊಂಡು ಬಂದ ಮೇಲೆ ಅಗ್ನಿಶಾಮಕ ಅಧಿಕಾರಿ ಜಿ.ಮಹಾಲಿಂಗಪ್ಪ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಇರ್ಷಾದ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಜಿ.ಮಹಾಲಿಂಗಪ್ಪ ಅವರನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ಈಶ್ವರ್ ಉಮೇಶ್ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್, ಸಿಬ್ಬಂದಿ ಮಹಾಂತೇಶ್, ಸುರೇಂದ್ರ, ಯೋಗೀಶ್, ಬಿ.ಟಿ.ಚನ್ನೇಶ್, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ದೇವರಾಜ್, ರಘುನಾಯ್ಕ, ಪುಟ್ಟಮ್ಮ, ಕೆ.ಸಿ.ಜಯಂತ, ಪ್ರದೀಪ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ – ಶಿವಮೊಗ್ಗ ಮಾರಿಕಾಂಬ ಜಾತ್ರೆ, ಗದ್ದುಗೆ ಮೇಲೆ ದೇವಿ ಪ್ರತಿಷ್ಠಾಪನೆ, ಹೇಗಿದೆ ವೈಭವ?