SHIVAMOGGA LIVE NEWS | 22 FEBRURARY 2023
SHIMOGA : ವಿದ್ಯುತ್ ಬಿಲ್ (Power Bill) ಪಾವತಿಸಿಲ್ಲ. ರಾತ್ರಿ 11 ಗಂಟೆಯೊಳಗೆ ವಿದ್ಯುತ್ ಸೇವೆ ಸ್ಥಗಿತಗೊಳಿಸುವುದಾಗಿ ಎಸ್ಎಂಎಸ್ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 4 ಲಕ್ಷ ರೂ. ಲಪಟಾಯಿಸಲಾಗಿದೆ.
ಶಿವಮೊಗ್ಗ ನಗರದ ನಿವೃತ್ತ ವೈದ್ಯರೊಬ್ಬರಿಗೆ 4 ಲಕ್ಷ ರೂ. ವಂಚಿಸಲಾಗಿದೆ. ಬಿಲ್ (Power Bill) ಪಾವತಿಸದೆ ಇದ್ದರೆ ನಿಮ್ಮ ಮನೆಗೆ ರಾತ್ರಿ 11 ಗಂಟೆಗೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಬಿಲ್ ಪಾವತಿ ಮಾಡಿದ್ದರೆ ನಮ್ಮ ಕಾಲ್ ಸೆಂಟರ್ ನಂಬರ್ ಗೆ ಕರೆ ಮಾಡಿ ಎಂದು ಮೆಸೇಜ್ ಬಂದಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗೊಂದಲಕ್ಕೀಡಾಗಿ ಕಾಲ್ ಸೆಂಟರ್ ಗೆ ಕರೆ
ಮೆಸೇಜ್ ನೋಡಿ ಗೊಂದಲಕ್ಕೀಡಾದ ನಿವೃತ್ತ ವೈದ್ಯರು ಮೆಸೇಜಿನಲ್ಲಿ ಸೂಚಿಸಿದ್ದ ಕಾಲ್ ಸೆಂಟರ್ ನಂಬರ್ ಗೆ ಕರೆ ಮಾಡಿದ್ದಾರೆ. ಮಾತನಾಡಿದ ವ್ಯಕ್ತಿಯೊಬ್ಬ ‘ನೀವು ಬಿಲ್ ಪಾವತಿಸಿರುವುದು ನಮ್ಮಲ್ಲಿ ರಿಜಿಸ್ಟರ್ ಆಗಿಲ್ಲ. ಆದ್ದರಿಂದ ನೀವು 11 ರೂ.ಗಳನ್ನು ಪಾವತಿಸಬೇಕಿದೆ. ಇದಕ್ಕೂ ಮೊದಲು ANY DESK APP ಡೌನ್ ಲೋಡ್ ಮಾಡಿಕೊಳ್ಳಿ’ ಎಂದು ಸೂಚಿಸಿದ್ದಾನೆ.
2 ಲಕ್ಷ ರೂ. ಎರಡು ಬಾರಿ ಕಡಿತ
ಕಾಲ್ ಸೆಂಟರ್ ವ್ಯಕ್ತಿ ಸೂಚಿಸಿದಂತೆ ನಿವೃತ್ತ ಡಾಕ್ಟರ್ ತಮ್ಮ ಮೊಬೈಲಿನಲ್ಲಿ ANY DESK APP ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ಇಂಟರ್ ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ಹಾಕುವಂತೆ ಆತ ತಿಳಿಸಿದ್ದಾನೆ. ಅದರಂತೆ ಡಾಕ್ಟರ್ ತಮ್ಮ ಬ್ಯಾಂಕಿಂಗ್ ಮಾಹಿತಿ ದಾಖಲು ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ 2 ಲಕ್ಷ ರೂ.ನಂತೆ ಎರಡು ಬಾರಿ ಹಣ ಕಡಿತವಾಗಿದೆ.
4 ಲಕ್ಷ ರೂ. ಹಣ ಕಡಿತವಾಗಿದ್ದರಿಂದ ನಿವೃತ್ತ ಡಾಕ್ಟರ್ ಆತಂಕಕ್ಕೀಡಾಗಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮೋಸ ಹೋಗದಿರಿ
ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಎಟಿಎಂ ಸೇವೆ ಸ್ಥಗಿತಗೊಳ್ಳಲಿದೆ, ಸೇರಿದಂತೆ ನಾನಾ ನೆಪ ಹೇಳಿ ವಂಚಕರು ಜಾಲ ಬೀಸುತ್ತಾರೆ. ಸುಳ್ಳು ಎಸ್ಎಂಎಸ್ ಕಳುಹಿಸಿ ವಂಚನೆ ಮಾಡುತ್ತಿದ್ದಾರೆ. ಇಂತಹ ಮೆಸೇಜುಗಳು ಬಂದಾಗ ಮೆಸ್ಕಾಂ ಕಚೇರಿಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಬಹುದು. ಬ್ಯಾಂಕಿಂಗ್ ವಿಚಾರಗಳಿದ್ದರೆ ನೇರವಾಗಿ ಬ್ಯಾಂಕಿಗೆ ತೆರಳಿ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು. ಎಸ್ಎಂಎಸ್ ಗಳ ಪೂರ್ವಪರ ತಿಳಿಯದೆ ಬ್ಯಾಂಕಿಂಗ್ ಮಾಹಿತಿಯನ್ನು ಯಾವುದೆ ಆಪ್ ನಲ್ಲಿ ದಾಖಲು ಮಾಡದಿರುವುದು ಒಳಿತು.