ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020
ಜನ ಶತಾಬ್ದಿ ರೈಲಿನಿಂದ ಅಯಾತಪ್ಪಿ ತುಂಗಾ ನದಿಗೆ ಬಿದ್ದಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ರೈಲ್ವೆ ಸೇತುವೆಯಿಂದ ಫರ್ಲಾಂಗ್ ದೂರದಲ್ಲಿ ಯುವತಿ ಶವ ಇವತ್ತು ಕಾಣಿಸಿಕೊಂಡಿದೆ.
36 ಗಂಟೆ ಬಳಿಕ ಮೃತದೇಹ
ನವೆಂಬರ್ 12ರಂದು ರಾತ್ರಿ ಜನ ಶತಾಬ್ದಿ ರೈಲಿನಿಂದ ಆಯಾತಪ್ಪಿ ಸಹನಾ (24) ತುಂಗಾ ಹೊಳೆಗೆ ಬಿದ್ದಿದ್ದಳು. ರಾತ್ರಿಯೇ ಶೋಧ ಕಾರ್ಯ ನಡೆದರೂ ಸಹನಾ ಪತ್ತೆಯಾಗಿರಲಿಲ್ಲ. ಇವತ್ತು ಅಗ್ನಿಶಾಮಕ ಸಿಬ್ಬಂದಿ ಮತ್ತು ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ವೇಳೆ ಸಹನಾ ಮೃತದೇಹ ಪತ್ತೆಯಾಗಿದೆ. ಕೂಡಲೆ ಮೃತದೇಹವನ್ನು ದಡಕ್ಕೆ ತರಲಾಯ್ತು.
ಸಚಿವರ ಮನೆ ಬಳಿ ತೇಲಿ ಹೋಗಿತ್ತು ಶವ
ಹೊಳೆಯಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಪಾಚಿ ಕಟ್ಟಿರುವುದರಿಂದ ಬಂಡೆಗಳು ಜಾರುತ್ತಿವೆ. ಹಾಗಾಗಿ ಸಹನಾ ಮೃತದೇಹ ಸೇತುವೆಯಿಂದ ಫರ್ಲಾಂಗ್ ದೂರ ಹೋಗಿರುವ ಸಾದ್ಯತೆ ಇದೆ. ಸಹನಾ ಮೃತ ದೇಹ ಸಚಿವ ಕೆ.ಎಸ್.ಈಶ್ವರಪ್ಪ ಮನೆ ಹಿಂಭಾಗ ಹೊಳೆಯಲ್ಲಿ ಪತ್ತೆಯಾಗಿದೆ.
ಘಟನೆ ಸಂಭವಿಸಿದ್ದು ಹೇಗೆ?
ದೀಪಾವಳಿ ಹಬ್ಬದ ಹಿನ್ನೆಲೆ ಸಹನಾ ಪೋಷಕರ ಜೊತೆ ಜನಶತಾಬ್ದಿ ರೈಲಿನಲ್ಲಿ ಬೆಂಗಳೂರಿನಿಂದ ಬರುತ್ತಿದ್ದರು. ಮೊಬೈಲ್‍ನಲ್ಲಿ ಮಾತನಾಡುತ್ತ ಬಾಗಿಲ ಬಳಿಗೆ ಬಂದಿದ್ದ ಸಹನಾ, ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ರೈಲು ತುಂಗಾ ನದಿ ಸೇತುವೆ ಮೇಲೆ ಸಂಚರಿಸುತ್ತಿತ್ತು.
ಅಗ್ನಿಶಾಮಕ ವಿಭಾಗದ ಡಿಎಫ್‍ಓ ಅಶೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]