ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಆಗಸ್ಟ್ 2020
ತಮಿಳುನಾಡು ಪೊಲೀಸರ ವಶದಲ್ಲಿದ್ದ ಹೊಸನಗರ ಮೂಲದ ನಕ್ಸಲ್ ಮಹಿಳೆಯನ್ನು ಶಿವಮೊಗ್ಗಕ್ಕೆ ಕರೆತರಲಾಗಿದೆ. ಆಕೆಯನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಯಾರದು ನಕ್ಸಲ್? ಎಲ್ಲಿಯವರು?
ನಕ್ಸಲ್ ಶೋಭಾ (34) ಎಂಬಾಕೆಯನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಕೆ ಹೊಸನಗರ ತಾಲೂಕು ಯಡೂರು ಸಮೀಪದ ಉಳ್ತಿಗಾ ಗ್ರಾಮದ ಮೇಲು ಸಂಕದವಳು. ಈಕೆ ಬಹುವರ್ಷ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದಳು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈಕೆ ವಿರುದ್ಧ ಪ್ರಕರಣಗಳು ದಾಖಲಾಗಿದೆ.
ಬಿಗಿ ಭದ್ರತೆಯಲ್ಲಿ ಶಿವಮೊಗ್ಗಕ್ಕೆ
ತಮಿಳುನಾಡಿನ ಕಯಮತ್ತೂರಿನ ಕ್ಯೂ ಬ್ರಾಂಚ್ ಪೊಲೀಸರ ವಶದಲ್ಲಿದ್ದ ಶೋಭಾಳನ್ನು ಬಿಗಿ ಭದ್ರತೆಯಲ್ಲಿ ಕರೆತರಲಾಗಿದೆ. ನಕ್ಸಲ್ ನಿಗ್ರಹ ಪಡೆ (ಎಎನ್‍ಎಫ್) ಭದ್ರತೆಯಲ್ಲಿ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನಷ್ಟು ದಿನ ಈಕೆ ಶಿವಮೊಗ್ಗ ಪೊಲೀಸರ ವಶದಲ್ಲಿ ಇರಲಿದ್ದಾಳೆ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿಯಲ್ಲಿ ಏನು ಪ್ರಕರಣ?
2012ರಲ್ಲಿ ನಕ್ಸಲರ ತಂಡವೊಂದು ಪೊಲೀಸರ ಮೇಲೆ ಫೈರಿಂಗ್ ಮಾಡಿತ್ತು. ತೀರ್ಥಹಳ್ಳಿ ತಾಲೂಕು ಆಗುಂಬೆಯ ಬರ್ಕಣ ಫಾಲ್ಸ್ ಬಳಿ ಘಟನೆ ಸಂಭವಿಸಿತ್ತು. ಈ ತಂಡದಲ್ಲಿ ಶೋಭಾ ಕೂಡ ಇದ್ದಳು ಎಂಬ ಆರೋಪವಿದೆ. ಈ ಪ್ರಕರಣದ ವಿಚಾರಣೆಗಾಗಿ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಕರೆತರಲಾಗಿದೆ.
ಕಯಮತ್ತೂರು ಪೊಲೀಸರ ವಶದಲ್ಲಿದ್ದಿದ್ದೇಕೆ?
ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆ ಕೊಯಮತ್ತೂರಿನ ತಡಗಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಭಾಳನ್ನು ಬಂಧಿಸಲಾಗಿತ್ತು. ಅಲ್ಲಿನ ಕ್ಯೂ ಬ್ರಾಂಚ್ ಪೊಲೀಸರು ಈಕೆಯನ್ನು ವಶಕ್ಕೆ ಪಡೆದಿದ್ದರು. ಮಾರ್ಚ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ ಶೋಭಾಳನ್ನು ಬಂಧಿಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]