SHIVAMOGGA LIVE NEWS | 22 FEBRURARY 2023
SHIMOGA : ಪೌಡರ್ ಬಳಸಿ ಚಿನ್ನಾಭರಣ ಫಳಫಳ (Gold Shine) ಹೊಳೆಯುವಂತೆ ಮಾಡುತ್ತೇವೆ ಎಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದೊಯ್ಯಲಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೈಕಿನಲ್ಲಿ ಬಂದ ‘ಕಂಪನಿ ಆಸಾಮಿಗಳು’
ಶಿವಮೊಗ್ಗದ ಮಲ್ಲಿಕಾರ್ಜುನ ಬಡಾವಣೆಯ ನಿವಾಸಿ ಮಹಿಳೆಯೊಬ್ಬರ ಮನೆ ಬಳಿ ಫೆ.20ರಂದು ಬೆಳಗ್ಗೆ 11.30ರ ಹೊತ್ತಿಗೆ ಇಬ್ಬರು ಯುವಕರು ಬೈಕಿನಲ್ಲಿ ಬಂದಿದ್ದಾರೆ. ತಾವು ಕಂಪನಿಯಿಂದ ಬಂದಿರುವುದಾಗಿ ತಿಳಿಸಿದ್ದಾರೆ. ತಾವು ತಂದಿದ್ದ ಬಿಳಿ ಬಣ್ಣದ ಪೌಡರ್ ಹೊರ ತೆಗೆದು, ಇದರಿಂದ ಆಭರಣ ಫಳಫಳ ಹೊಳೆಯುವಂತೆ (Gold Shine) ಮಾಡಲಾಗುತ್ತದೆ ಎಂದಿದ್ದಾರೆ. ಅಲ್ಲದೆ ಮಹಿಳೆ ಕೈಯಲ್ಲಿದ್ದ ಬಳೆಗೆ ಉಜ್ಜಿ, ಹೊಳಪು ಬರುವಂತೆ ಮಾಡಿ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳೆ, ರಿಂಗ್ ಬಿಚ್ಚಿ ಕೊಟ್ಟರು
ಬಳಿಕ ನಿಮ್ಮ ಕೈಯಲ್ಲಿರುವ ಬಳೆ, ಉಂಗುರಗಳನ್ನು ಬಿಚ್ಚಿ ಒಂದು ಕುಕ್ಕರ್ ನಲ್ಲಿ ಹಾಕಿ ಕೊಡಿ ಎಂದು ಯುವಕರು ತಿಳಿಸಿದ್ದಾರೆ. ಅವರು ಹೇಳಿದಂತೆಯೇ ಮಹಿಳೆ ಮಾಡಿದ್ದಾರೆ. ಕುಕ್ಕರ್ ನಲ್ಲಿ ಚಿನ್ನಾಭರಣ ಇಟ್ಟು, ಯುವಕರು ಬಿಳಿ ಮತ್ತು ಹಳದಿ ಪೌಡರ್ ಸುರಿದಿದ್ದಾರೆ. ಸ್ವಲ್ಪ ನೀರು ಬೇಕು ಎಂದು ಕೇಳಿದ್ದರಿಂದ ಮಹಿಳೆ ಮನೆಯೊಳಗೆ ಹೋಗಿ ನೀರು ತಂದಿದ್ದಾರೆ. ಯುವಕರು ನೀರನ್ನು ಕುಕ್ಕರ್ ಹಾಗಿ ಮಹಿಳೆಯ ಕೈಗಿಟ್ಟಿದ್ದಾರೆ.
ಅರ್ಧ ಗಂಟೆ ಒಲೆ ಮೇಲೆ ಕುದಿಸಿ
ಕುಕ್ಕರ್ ಅನ್ನು ಅರ್ಧ ಗಂಟೆ ಒಲೆ ಮೇಲಿಟ್ಟು ಕುದಿಸಿ ತೆಗೆಯಿರಿ. ಅದರೊಳಗೆ ಇರುವ ಚಿನ್ನಾಭರಣ ಹೊಳೆಯುತ್ತದೆ ಎಂದು ಯುವಕರು ತಿಳಿಸಿ ಹೋಗಿದ್ದಾರೆ. ಅದರಂತೆ ಮಹಿಳೆ ಮಾಡಿದ್ದಾರೆ. ಅರ್ಧ ಗಂಟೆಯ ಬಳಿಕ ಕುಕ್ಕರ್ ತೆಗೆದಾಗ ಬಳೆ, ಉಂಗುರಗಳು ಇರಲಿಲ್ಲ. ಆತಂಕಕ್ಕೀಡಾಗಿ ಮಹಿಳೆ ತಮ್ಮ ಕುಟುಂಬದವರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ‘ರಾತ್ರಿ 11 ಗಂಟೆಗೆ ಮನೆ ಕರೆಂಟ್ ಕಟ್’, SMS ನಂಬಿದ ಶಿವಮೊಗ್ಗದ ಡಾಕ್ಟರ್ ಗೆ ಕಾದಿತ್ತು ದೊಡ್ಡ ಆಘಾತ
1.75 ಲಕ್ಷ ರೂ. ಮೌಲ್ಯದ 3 ಬಂಗಾರದ ಬಳೆ, 30 ಸಾವಿರ ಮೌಲ್ಯದ ಎರಡು ಚಿನ್ನದ ಉಂಗುರ ಸೇರಿ 2.05 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.