ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019
ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಆತನ ಕೈಕಾಲು ಕಟ್ಟಿ ಹಾಕಿ, ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿದೆ. ಖತರ್ನಾಕ್ ಕಳ್ಳರ ಕೈಚಳಕ ದೇವಸ್ಥಾನದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಮಧ್ಯರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಬಂಧಿಸುವುದಾಗಿ ತಿಳಿಸಿದ್ದಾರೆ.
ಕಳ್ಳತನ ಆಗಿದ್ದು ಯಾವ ದೇವಸ್ಥಾನದಲ್ಲಿ?
ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ, ಬಿದರೆ ಬಳಿ ಇರುವ ದೇವಸ್ಥಾನದಲ್ಲಿ ಘಟನೆ ನಡೆದಿದೆ. ನಾಲ್ಕರಿಂದ ಐದು ಕಳ್ಳರು ಭಾಗಿ ಆಗಿರುವ ಶಂಕೆ ಇದೆ.

ಸೆಕ್ಯೂರಿಟ ಮೇಲೆ ಅಟ್ಯಾಕ್
ರಾತ್ರಿ 3 ಗಂಟೆ ಹೊತ್ತಿಗೆ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಆವರಣದೊಳಗೆ ಬಂದ ಕಳ್ಳರು, ಮೊದಲು ಸೆಕ್ಯೂರಿಟಿ ಗಾರ್ಡ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ (62) ಅವರ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಹಾಕಿದ್ದಾರೆ.

ಬಾಗಿಲು ಬಳಿಯ ಗ್ಲಾಸ್ ಪೀಸ್ ಪೀಸ್
ಸಾಯಿ ಮಂದಿರದ ಮುಖ್ಯ ದ್ವಾರಕ್ಕೆ ಗ್ಲಾಸ್ ಅಳವಡಿಸಲಾಗಿದೆ. ಇದನ್ನು ಒಡೆದಿರುವ ಕಳ್ಳರು ಬಾಗಿಲು ತೆಗೆದು ದೇವಸ್ಥಾನದ ಒಳಗೆ ಹೋಗಿದ್ದಾರೆ. ಒಳಗಿದ್ದ ಮೂರು ಸಣ್ಣ ಮತ್ತು ಎರಡು ದೊಡ್ಡ ಹುಂಡಿಗಳನ್ನು ಒಡೆದು, ಕಾಣಿಕೆ ಹಣವನ್ನು ದೋಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಮಧ್ಯರಾತ್ರಿ ಘಟನೆ ನಡೆದಿದ್ದು, ಬೆಳಗ್ಗೆ ಎಲ್ಲರಿಗೂ ಗೊತ್ತಾಗಿದೆ. ಮರಕ್ಕೆ ಕಟ್ಟಿದ್ದ ಹಗ್ಗದಿಂದ ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ ಬಿಡಿಸಿಕೊಂಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಿ, ಮಂದಿರದ ಪ್ರಮುಖರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನಡೆಯುತ್ತಿದೆ.

ಕಳ್ಳರು ಕದ್ದ ಹಣವೆಷ್ಟು?
ಹುಂಡಿ ಒಡೆದಿರುವ ಕಳ್ಳರಿಗೆ ಸುಮಾರು 60 ರಿಂದ 70 ಸಾವಿರದಷ್ಟು ಕಾಣಿಕೆ ಹಣ ಸಿಕ್ಕಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ದೇವಸ್ಥಾನದ ಆಡಳಿತ ಮಂಡಳಿ ನಿರಾಕರಿಸಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Theft has been reported in Shree Shiradi Sai Mandira in near Bidare village in Shimoga. Thieves attacked the security guard, broke the doors of the sai mandir. A complaint has been reported in Shimoga Rural Police Station.