ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಜನವರಿ 2022
ಶಿವಮೊಗ್ಗ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ಒಂದೇ ದಿನ ಸರಣಿ ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಒಂದು ಗಂಟೆ ಅವಧಿಯಲ್ಲಿ ನಾನಾ ಕಡೆ ಸರಗಳ್ಳತನ, ಪರ್ಸ್ ಕಳ್ಳವು ಪ್ರಕರಣ ವರದಿಯಾಗಿದೆ.
ಎಲ್ಲೆಲ್ಲಿ ಸರಗಳ್ಳತನ ಆಗಿದೆ?
♦ ಪ್ರಕರಣ 1 : ಕೃಷ್ಣಾ ಕೆಫೆ ಬಳಿ
ಕೃಷ್ಣಾ ಕೆಫೆ ಪಕ್ಕದ ಓಲ್ಡ್ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಎಲಿಜಬತ್ ಕ್ಯಾಸ್ಟಲಿನೋ ಎಂಬುವವರ ಕೊರಳಲಿದ್ದ 35 ಗ್ರಾಂ ಚಿನ್ನದ ಸರವನ್ನ ಕದ್ದೊಯ್ಯಲಾಗಿದೆ. ಇದರ ಮೌಲ್ಯ ಸುಮಾರು 1.57 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
♦ ಪ್ರಕರಣ 2 : ಹೊಸಮನೆ ಬಡಾವಣೆ
ಹೊಸಮನೆ ಬಡಾವಣೆಯ ಚರ್ಚ್ ಬಳಿ ಮಂಗಳಾ ಎಂಬುವವರ ಕೊರಳಲ್ಲಿದ್ದ 55 ಗ್ರಾಂ ಚಿನ್ನದ ಸರನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರ ಮೌಲ್ಯ 2.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
♦ ಪ್ರಕರಣ 3 : ಎಲ್ಎಲ್ಆರ್ ರಸ್ತೆ
ಶುಭಂ ಹೊಟೇಲ್ ಬಳಿ ಬೈಕ್’ನಲ್ಲಿ ಬಂದ ಇಬ್ಬರು ಯುವಕರು ನೇತ್ರಾವತಿ ಎಂಬುವವರ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಗನೊಂದಿಗೆ ಶಾಪಿಂಗ್’ಗೆ ಬಂದಾಗ ಘಟನೆ ಸಂಭವಿಸಿದೆ. ಪರ್ಸ್’ನಲ್ಲಿ 8 ಸಾವಿರ ರೂ. ನಗದು, 11 ಸಾವಿರ ರೂ. ಮೌಲ್ಯದ ಮೊಬೈಲ್ ಇತ್ತು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು, ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಸರಗಳ್ಳತನವಾಗಿರುವ ವರದಿಯಾಗಿದೆ. ಶಿವಮೊಗ್ಗದ ಗಾಂಧಿ ನಗರದಲ್ಲಿ ಮಹಿಳೆಯೊಬ್ಬರ ಸರಗಳ್ಳತನಕ್ಕೆ ವಿಫಲ ಯತ್ನವಾಗಿದೆ.
♦ ಬೈಕ್’ನಲ್ಲಿ ಬಂದ ಖದೀಮರು
ಅಂದಾಜು 25 ರಿಂದ 30 ವರ್ಷದೊಳಗಿನ ಇಬ್ಬರು ಯುವಕರು ಬೈಕ್’ನಲ್ಲಿ ಬಂದು ಸರಣಿ ಸರಗಳ್ಳತನ ಮಾಡಿದ್ದಾರೆ. ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದಾರೆ.
♦ ಸಿಸಿಟಿವಿ ವಿಡಿಯೋ ವರೈಲ್
ಹೊಸಮನೆ ಬಡಾವಣೆಯ ಚರ್ಚ್ ಬಳಿ ಸರಗಳ್ಳತನ ಮಾಡಿರುವ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಮಂಗಳಾ ಎಂಬುವವರು ವಾಕಿಂಗ್ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮಂಗಳಾ ಅವರು ನಡೆದು ಬರುವಾಗ ಹಿಂಬಾಲಿಸಿ ಬಂದ ಯುವಕನೊಬ್ಬ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಓಡಿ ಹೋಗುತ್ತಾನೆ. ಸಮೀಪದಲ್ಲೇ ಬೈಕ್ ಸ್ಟಾರ್ಟ್ ಮಾಡಿಕೊಂಡು ನಿಂತಿದ್ದ ಮತ್ತೊಬ್ಬ ಯುವಕ, ಈತನನ್ನು ಕೂರಿಸಿಕೊಂಡು ಪರಾರಿಯಾಗುತ್ತಾನೆ. ಇದಕ್ಕೂ ಮೊದಲು ಇವರು ಹೊಂಚು ಹಾಕುವುದು, ಆ ಬಳಿಕ ಸರಗಳ್ಳತನ ಮಾಡುವುದು ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
♦ ಸಿಟಿಯಲ್ಲಿ ಪೊಲೀಸ್ ಬಂದೋಬಸ್ತ್
ಸರಣಿ ಸರಗಳ್ಳತನ ಪ್ರಕರಣದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಇವತ್ತು ಸಂಜೆಯಿಂದ ಪೊಲೀಸರು ಬಿಗಿ ಗಸ್ತು ಆರಂಭಿಸಿದ್ದಾರೆ. ಹಲವು ಕಡೆ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200