SHIVAMOGGA LIVE | 20 JUNE 2023
SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂಟಿ ಮಹಿಳೆಯ ಹತ್ಯೆ ಪ್ರಕರಣ ಸಂಬಂಧ ಕಾರು ಚಾಲಕನ (Driver) ವಿರುದ್ಧ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ದಿನದಿಂದ ಆತ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಇತ್ತ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಾಗಿತ್ತು?
ಶಿವಮೊಗ್ಗದ ವಿಜಯನಗರದ 2ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಕಮಲಾ (50) ಎಂಬುವವರ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು. ಕಮಲಾ ಅವರ ಪತಿ ಅಪ್ಪರ್ ಭದ್ರಾ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಕೆ.ವಿ.ಮಲ್ಲಿಕಾರ್ಜುನ ಅವರು ಸ್ನೇಹಿತರ ಜೊತೆಗೆ ಗೋವಾಗೆ ತೆರಳಿದ್ದಾಗ ಘಟನೆ ಸಂಭವಿಸಿತ್ತು. ಹಲವು ಬಾರಿ ಕರೆ ಮಾಡಿದರು ಪತ್ನಿ ಕರೆ ಸ್ವೀಕರಿಸದ ಹಿನ್ನೆಲೆ ಮಲ್ಲಿಕಾರ್ಜುನ ಅವರು ಎದುರು ಮನೆಯಲ್ಲಿರುವ ಪರಿಚಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಎದುರು ಮನೆಯವರು ಮಲ್ಲಿಕಾರ್ಜುನ ಅವರ ಮನೆಗೆ ಹೋದಾಗ ಕಮಲಾ ಅವರು ಅಡುಗೆ ಮನೆಯಲ್ಲಿ ಬಿದ್ದಿದ್ದು, ಮೂಗಿನಿಂದ ರಕ್ತ ಬರುತ್ತಿರುವುದನ್ನು ಗಮನಸಿದ್ದರು.
ಕಾರು ಚಾಲಕನ ಮೇಲೆ ಶಂಕೆ
ಮಲ್ಲಿಕಾರ್ಜುನ ಅವರ ಮನೆಯಲ್ಲಿ ಕಳೆದ ಕೆಲವು ತಿಂಗಳಿಂದ ಯುವಕನೊಬ್ಬ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಲ್ಲಿಕಾರ್ಜುನ ಅವರು ಗೋವಾಗೆ ತಮ್ಮ ಕಾರಿನಲ್ಲಿ ತೆರಳಬೇಕಿದ್ದು, ಕಾರು ಚಲಾಯಿಸಲು ಬಾ ಎಂದು ಕರೆದಾಗ ಆತ ಬರಲು ಒಪ್ಪಿರಲಿಲ್ಲ. ಧರ್ಮಸ್ಥಳಕ್ಕೆ ತೆರಳಬೇಕಿದೆ ಎಂದು ತಿಳಿಸಿ ತನ್ನ ಪರಿಚಿತ ಮತ್ತೊಬ್ಬ ಚಾಲಕನನ್ನು ಕಳುಹಿಸಿದ್ದ. ಮಲ್ಲಿಕಾರ್ಜುನ ಅವರು ಗೋವಾಗೆ ತೆರಳಿದ ಬಳಿಕ ರಾತ್ರಿ 11 ಗಂಟೆ ಹೊತ್ತಿಗೆ ಚಾಲಕ ಮನೆ ಬಳಿ ಬಂದಿದ್ದ. 5 ಸಾವಿರ ರೂ.ಹಣ ನೀಡುವಂತೆ ಕೇಳಿದ್ದ. ಕಮಲಾ ಅವರು ಪತಿಗೆ ಕರೆ ಮಾಡಿದ್ದು, ಚಾಲಕನ ಜೊತೆಗೆ ಮಲ್ಲಿಕಾರ್ಜನ ಅವರು ಮಾತನಾಡಿ ಬೆಳಗ್ಗೆ ಬರುವಂತೆ ತಿಳಿಸಿದ್ದರು.
ಇದನ್ನೂ ಓದಿ – ಮಹಿಳೆಯರೆ ಹುಷಾರ್, ಇವರ ಮುಂದಿನ ಟಾರ್ಗೆಟ್ ನೀವೆ, ಶಿವಮೊಗ್ಗದಲ್ಲೂ 3 ಕೇಸ್ ದಾಖಲು
ಮರುದಿನವೆ ನಡೆಯಿತು ಹತ್ಯೆ
ಜೂ.17ರಂದು ಬೆಳಗ್ಗೆ ಮಲ್ಲಿಕಾರ್ಜುನ ಅವರು ಪತ್ನಿ ಕಮಲಾ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ರಾತ್ರಿ ಕರೆ ಮಾಡಿದಾಗ ಪತ್ನಿ ಕರೆ ಸ್ವೀಕರಿಸಲಿಲ್ಲ. ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮಗನಿಗೆ ಕರೆ ಮಾಡಿದಾಗಲೂ ತಾಯಿ ಕರೆ ಸ್ವೀಕರಿಸಲಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆ ಎದುರು ಮನೆಯವರಿಗೆ ಮಲ್ಲಿಕಾರ್ಜನ ಅವರು ಕರೆ ಮಾಡಿದ್ದು, ಅವರು ಪರಿಶೀಲಿಸಲು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಲಕ್ಷ ಲಕ್ಷ ಹಣವಿಲ್ಲ, ಡ್ರೈವರ್ ಸುಳಿವಿಲ್ಲ
ವಿಚಾರ ತಿಳಿದು ಮಲ್ಲಿಕಾರ್ಜುನ ಅವರು ಗೋವಾದಿಂದ ವಾಪಸಾಗಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಕಬೋರ್ಡ್ನಲ್ಲಿ ಇಟ್ಟಿದ್ದ 35 ಲಕ್ಷ ರೂ. ಹಣ ನಾಪತ್ತೆಯಾಗಿತ್ತು. ಇನ್ನು, ಕಾರು ಚಾಲಕನ (Driver) ಸುಳಿವಿಲ್ಲದಾಗಿದೆ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಆತನೆ ಕೃತ್ಯ ಎಸಗಿರಬಹುದು ಎಂದು ಮಲ್ಲಿಕಾರ್ಜುನ ಅವರು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ಫೇಸ್ಬುಕ್ನಲ್ಲಿ ಜಾಹೀರಾತು, ಫೋನಿನಲ್ಲಿ ಬಣ್ಣ ಬಣ್ಣದ ಮಾತು, ನಂಬಿದ ಶಿವಮೊಗ್ಗದ ವ್ಯಕ್ತಿಗೆ ಆಘಾತ ಕಾದಿತ್ತು, ಏನಿದು?
ಇತ್ತ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200