SHIVAMOGGA LIVE NEWS | THREAT | 04 ಮೇ 2022
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿ ಸಮೀಪ ಡಾ.ರಾಜನಂದಿನಿ ಅವರ ಕಾರು ಅಡ್ಡಗಟ್ಟಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆದರಿಕೆ ಒಡ್ಡಿದ್ದು ಯಾರು?
ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಸಾಗರ ತಾಲೂಕಿನ ವಿವಿಧೆಡೆ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಮೇ 2ರಂದು ತ್ಯಾಗರ್ತಿಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಡಾ.ರಾಜನಂದಿನಿ ಕಾಗೋಡು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ವೇಳೆ ಸಾಗರಕ್ಕೆ ಹಿಂತಿರುಗುತ್ತಿದ್ದಾಗ ಯುವಕನೊಬ್ಬ ಡಾ. ರಾಜನಂದಿ ಅವರ ಕಾರು ಅಡ್ಡಗಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಕಾರಿನಲ್ಲಿ ಕಾಗೋಡು ಪುತ್ರಿ ಇರಲ್ಲಿಲ್ಲ
ಕಾಗೋಡು ತಿಮ್ಮಪ್ಪ ಫೌಂಡೇಶನ್ ಪ್ರಮುಖರು ಮಧ್ಯಾಹ್ನ ಸಾಗರಕ್ಕೆ ತೆರಳುತ್ತಿದ್ದರು. ಡಾ.ರಾಜನಂದಿನಿ ಅವರು ತಮ್ಮ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡಾ.ರಾಜನಂದಿನಿ ಅವರ ಕಾರಿನಲ್ಲಿ ಫೌಂಡೇಶನ್ನಿನ ಇತರೆ ಪ್ರಮುಖರು ಸಾಗರಕ್ಕೆ ತೆರಳುತ್ತಿದ್ದರು. ತ್ಯಾಗರ್ತಿಯ ಮಾರಿಗುಡಿ ಸಮೀಪ ಮಂಜು ಎಂಬಾತ ಡಾ. ರಾಜನಂದಿನಿ ಅವರ ಕಾಡು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದಾನೆ.
ಬೆದರಿಕೆ ಒಡ್ಡಿದ್ದಾತ ಹೇಳಿದ್ದೇನು?
ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಂಜು, ಕಾರಿನಲ್ಲಿ ಯಾರೆಲ್ಲ ಇದ್ದಾರೆ. ಎಲ್ಲಿಗೆ ಹೊರಟಿದ್ದೀರ ಎಂದು ವಿಚಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ‘ರಾಜನಂದಿನಿ ಮೇಡಂ ಏನು ದೊಡ್ಡ ಕೋಲಾ? ಇತ್ತೀಚೆಗೆ ಬಹಳ ಹಾರಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಸುಮ್ಮನೆ ಬಿಡುವುದಿಲ್ಲ. ನಾನು ಒಬ್ಬನೆ ಎಂದು ತಿಳಿದುಕೊಳ್ಳಬೇಡ. ನನ್ನೊಂದಿಗೆ ಇನ್ನೂ ಬಹಳ ಜನ ಇದ್ದಾರೆ. ನಾವೆಲ್ಲ ಸೇರಿ ಅವರ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಫಾಲೋ ಮಾಡಿದ ಬೈಕುಗಳು
ಕೊಲೆ ಬೆದರಿಕೆ (THREAT) ಒಡ್ಡಿದ ಮಂಜು ಚಾಲಕ ಪ್ರಕಾಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕಾರಿನಲ್ಲಿದ್ದ ಫೌಂಡೇಶನ್ ಪ್ರಮುಖರು ಕೂಗಾಡಿದ್ದಾರೆ. ಈ ವೇಳೆ ಚಾಲಕ ಪ್ರಕಾಶ್ ಆರೋಪಿ ಮಂಜುನಿಂದ ತಪ್ಪಿಸಿಕೊಂಡು ಸಾಗರದ ಕಡೆಗೆ ಕಾರು ಚಲಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲವೆ ಹೊತ್ತಿನಲ್ಲಿ ನಾಲ್ಕು ಬೈಕುಗಳಲ್ಲಿ 8 ಯುವಕರು ತಮ್ಮ ಕಾರನ್ನು ಹಿಂಬಾಲಿಸಿದ್ದಾರೆ. ಮುಳ್ಳಾ ಕ್ರಾಸ್ ವರೆಗೂ ತಮ್ಮ ಕಾರುನ್ನು ಹಿಂಬಾಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿದ ಚಾಲಕ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ್ದು, ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಕಾರನ್ನು ಹಿಂಬಾಲಿಸಿದ ಸಂಬಂಧ ಮಂಜು ಮತ್ತು ಇತರರರ ವಿರುದ್ಧ ಚಾಲಕ ಪ್ರಕಾಶ್ ದೂರು ನೀಡಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಿಕೆಟ್ ಆಕಾಂಕ್ಷಿ ಡಾ.ರಾಜನಂದಿನಿ
ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಸಾಗರ ತಾಲೂಕಿನಾದ್ಯಂತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ರಾಜನಂದಿನಿ ಅವರು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಡಾ.ರಾಜನಂದಿನಿ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿಯೆ ಬೆದರಿಕೆ ಒಡ್ಡಿರುವ ಸಾದ್ಯತೆ ಇರಬಹುದಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಮಂಗನ ಕಾಯಿಲೆಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಾವು, ಏನಿದು ಮಂಗನ ಕಾಯಿಲೆ? ಲಕ್ಷಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200