SHIVAMOGGA LIVE | 8 JUNE 2023
AYANURU : ಬಾರ್ ಕ್ಯಾಶಿಯರ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕುಂಸಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ (Cases) ದಾಖಲಾಗಿದೆ. ಎರಡು ಪ್ರಕರಣಗಳಲ್ಲಿ ಮೂವರು ಆರೋಪಿಗಳಿದ್ದಾರೆ. ಆರೋಪಿ ಸತೀಶ್ ವಿರುದ್ಧ ಪ್ರತ್ಯೇಕವಾಗಿ ಒಂದು ಪ್ರಕರಣ ದಾಖಲಾಗಿದೆ.
ಜೂ.4ರ ರಾತ್ರಿ ಆಯನೂರಿನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕ್ಯಾಶಿಯರ್ ಸಚಿನ್ ಹತ್ಯೆ ಮಾಡಲಾಗಿತ್ತು. ಬಾರ್ ಬಂದ್ ಮಾಡುವ ಸಮಯವಾಗಿದೆ ಎಂದು ತಿಳಿಸಿದ್ದಕ್ಕೆ ಆಯನೂರು ಕೋಟೆಯ ನಿರಂಜನ, ಸತೀಶ ಮತ್ತು ಅಶೋಕ ನಾಯ್ಕ್ ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದರು. ಈ ವೇಳೆ ನಿರಂಜನ ತನ್ನ ಬಳಿ ಇದ್ದ ಚಾಕುವಿನಿಂದ ಸಚಿನ್ ಎದೆಗೆ ಚಚ್ಚಿ ಹತ್ಯೆ ಮಾಡಿದ್ದ.
ಮೂರು ಕೇಸ್‌ನಲ್ಲಿ ಏನೇನಿದೆ?
ಕೇಸ್ 1 : ಬಾರ್ ಸಿಬ್ಬಂದಿಯಿಂದ ದೂರು
ಘಟನೆ ಸಂಬಂಧ ಮೂವರು ಆರೋಪಿಗಳ ವಿರುದ್ಧ ಬಾರ್ ಸಿಬ್ಬಂದಿ ದೂರು ನೀಡಿದ್ದಾರೆ. ಬಾರ್ ಬಂದ್ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಮೂವರು ಗಲಾಟೆ ಮಾಡಿದರು. ಪೊಲೀಸರನ್ನು ಕರೆಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದರು. ಸತೀಶನು ಖಾಲಿ ಬಿಯರ್ ಬಾಟಲಿಯನ್ನು ತಲೆಗೆ ಹೊಡೆದುಕೊಂಡು ಹಲ್ಲೆಗೆ ಮುಂದಾದ. ಈ ವೇಳೆ ಬಾರ್ ಸಿಬ್ಬಂದಿ ಅರುಣ್ ಕುಮಾರ್ ಬೆರಳಿಗೆ ಬಾಟಲಿ ತಾಗಿ ಗಾಯವಾಗಿದೆ. ಪೊಲೀಸರು ಬಂದು ಜಗಳ ಬಿಡಿಸಿ ಕಳಹಿಸುತ್ತಿದ್ದಾಗ ಆರೋಪಿ ನಿರಂಜನ ತನ್ನ ಬಳಿ ಇದ್ದ ಚಾಕುವಿನಿಂದ ಸಚಿನನ ಎದೆ, ಹೊಟ್ಟೆ, ಪಕ್ಕೆಗೆ ಚಿಚ್ಚಿದ ಎಂದು ಆರೋಪಿಸಲಾಗಿದೆ.
ಕೇಸ್ 2 : ಪೊಲೀಸ್ ಸಿಬ್ಬಂದಿಯಿಂದ ದೂರು
ಬಾರ್‌ನಲ್ಲಿ ಗಲಾಟೆ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಗಂಗಾಧರ ಮತ್ತು ಪರಶುರಾಮ ಅವರು ಇಆರ್‌ವಿ ವಾಹನದಲ್ಲಿ ಬಾರ್ ಬಳಿ ತೆರಳಿದ್ದರು. ಜಗಳ ಬಿಡಿಸುವಾಗ ನಿರಂಜನ ಎಂಬಾತ ಚಾಕುವಿನಿಂದ ಕ್ಯಾಶಿಯರ್ ಸಚಿನ್‌ಗೆ ಮೂರ್ನಾಲ್ಕು ಕಡೆ ಚುಚ್ಚಿದ. ಅಲ್ಲದೆ ಪೊಲೀಸರಿಗೆ ಅವಾಚ್ಯ ಶಬ್ದಗಳಲ್ಲಿ ಬೈದು, ಜೀವ ಬೆದರಿಕೆ ಒಡ್ಡಿದ ಎಂದು ಆರೋಪಿಸಲಾಗಿದೆ. ಪೊಲೀಸ್ ವಾಹನದ ಮೇಲೆ ಕಲ್ಲು ಎತ್ತಿ ಹಾಕಲು ಯತ್ನಿಸಿದರು. ವಾಹನದಲ್ಲಿದ್ದ ಟ್ಯಾಬ್ ಅನ್ನು ನೆಲಕ್ಕೆ ಹೊಡೆದು ಹಾನಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇಸ್ 3 : ಸಬ್ ಇನ್ಸ್‌ಪೆಕ್ಟರ್ ದೂರು
ಆರೋಪಿಗಳ ಪತ್ತೆಗೆ ತುಂಗಾ ನಗರ ಠಾಣೆ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದಲ್ಲಿ ಒಂದು ತಂಡ ರಚಿಸಲಾಗಿತ್ತು. ಯರೇಕೊಪ್ಪದ ಅರಣ್ಯದಲ್ಲಿ ಸತೀಶ ಅವಿತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಪಿಎಸ್‌ಐ ರಾಜು ರೆಡ್ಡಿ, ಸಿಬ್ಬಂದಿ ಶಿವರಾಜ್, ಪ್ರವೀಣ್ ಅರಣ್ಯಕ್ಕೆ ಹೋದಾಗ ಸತೀಶ ಪತ್ತೆಯಾಗಿದ್ದ. ವಶಕ್ಕೆ ಪಡೆಯಲು ಹತ್ತಿರ ಹೋಗುತ್ತಿದ್ದಂತೆ ಸತೀಶನು ತನ್ನ ಬಳಿ ಇದ್ದ ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಪ್ರವೀಣ್ ಅವರ ಕುತ್ತಿಗೆಯತ್ತ ಬೀಸಿದ್ದ. ತಪ್ಪಿಸಿಕೊಳ್ಳುವ ಭರದಲ್ಲಿ ಪ್ರವೀಣ್ ಅವರ ಬಲಗೈಗೆ ಗಾಯವಾಗಿದೆ. ಇದೆ ಮಾದರಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಶಿವರಾಜ್ ಅವರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಆಯನೂರು ಹತ್ಯೆ ಕೇಸ್, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? ಸತೀಶನ ಕಾಲಿಗೆ ಗುಂಡು ಹಾರಿಸಿದ್ದೇಕೆ? ಕಂಪ್ಲೀಟ್ ಮಾಹಿತಿ
ಚಾಕು ಕೆಳಗೆ ಬಿಸಾಕಿ ಶರಣಾಗುವಂತೆ ಪಿಎಸ್‌ಐ ರಾಜು ರೆಡ್ಡಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೆಳಗೆ ಬಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಸತೀಶನು ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ಹಾಗಾಗಿ ಆತನ ಬಲಗಾಲಿನ ಪಾದಕ್ಕೆ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200