SHIVAMOGGA LIVE NEWS | 1 ಮಾರ್ಚ್ 2022
ಲಾರಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಹಿಂಬದಿಯಲ್ಲಿದ್ದ ಅಕೇಶಿಯಾ ಪೋಲ್’ಗಳು ಬಿದ್ದು ಆಯುರ್ವೇದ ವೈದ್ಯ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಸಾಗರ ತಾಲೂಕು ಹರುಡಿಕೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರಿಗೆ ಬಲಗೈ ಮೂಳೆ ಮುರಿದಿದೆ. ವೈದ್ಯರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಗಣೇಶ್ ಎಂಬುವವರ ಹೊಟ್ಟೆ, ಸೊಂಟಕ್ಕೆ ಗಾಯವಾಗಿದೆ.
ಹೇಗಾಯ್ತು ಘಟನೆ?
ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರು ಸಾಗರದಿಂದ ಹೆಗ್ಗೋಡಿಗೆ ತೆರಳುತ್ತಿದ್ದರು. ತಮ್ಮೊಂದಿಗೆ ಬೈಕಿನಲ್ಲಿ ಗಣೇಶ್ ಎಂಬುವವರನ್ನು ಕರೆದೊಯ್ಯುತ್ತಿದ್ದರು.
ಹರುಡಿಕೆ ಗ್ರಾಮದ ಬಳಿಕ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿಯ ಸೇತುವೆಯ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿದ್ದ ಅಕೇಶಿಯಾ ಪೋಲ್ಸ್’ಗಳು ವೈದ್ಯರು ಮತ್ತು ಅವರ ಸ್ನೇಹಿತನ ಮೇಲೆ ಬಿದ್ದಿವೆ.
ಘಟನೆಯಲ್ಲಿ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರ ಬಲಗೈ ಮೂಳೆ ಮುರಿದಿದೆ. ಎಡಗೈ, ತಲೆಯ ಹಲವು ಕಡೆ ಗಾಯವಾಗಿದೆ. ಗಣೇಶ್ ಅವರಿಗೆ ಹೊಟ್ಟೆ, ಸೊಂಟ ಸೇರಿದಂತೆ ಹಲವು ಕಡೆ ಗಾಯವಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.