ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಅಕ್ಟೋಬರ್ 2021
ಆಯುಧ ಪೂಜೆಯ ರಾತ್ರಿ ಶಿವಮೊಗ್ಗದಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇವರು ಅಮಾಯಕನೊಬ್ಬನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಯಾರನ್ನೋ ಕೊಲ್ಲಲು ಬಂದವರು ಮತ್ಯಾರನ್ನೋ ಕೊಂದಿರುವುದಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ
ಅಕ್ಟೋಬರ್ 14ರ ರಾತ್ರಿ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಸಂತೋಷ್ (30) ಎಂಬಾತನನ್ನು ಬಾಪೂಜಿನಗರಲ್ಲಿ ಹತ್ಯೆ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ಹತ್ಯೆ ಮಾಡಿದ ನಾಲ್ವರು ಅರೆಸ್ಟ್
ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಕೆ ಮಾಡಿದ್ದ ಮಾರಕಾಸ್ತ್ರ ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆದರೆ ವಿಚಾರಣೆ ವೇಳೆ ಆರೋಪಿಗಳು ತಾವು ಕಿರಣ್ ಎಂಬಾತನ ಹತ್ಯೆ ಮಾಡುವ ಬದಲು ಸಂತೋಷನ ಕೊಲೆಗೈದಿರುವುದಾಗಿ ತಿಳಿಸಿದ್ದಾರೆ.
ಸಂತೋಷ್ ಬೈಕ್’ನಿಂದ ಗೊಂದಲ
ಕಿರಣ ಬಳಕೆ ಮಾಡುತ್ತಿದ್ದ ಬೈಕು, ಸಂತೋಷ ಬಳಕೆ ಮಾಡುತ್ತಿದ್ದ ಬೈಕು ಒಂದೇ ಮಾದರಿಯದ್ದಾಗಿತ್ತು. ಗಂಗಾಮತ ಹಾಸ್ಟೆಲ್ ಬಳಿ ಕಿರಣನೆ ಬಂದು ನಿಂತಿದ್ದಾನೆ ಎಂದು ಭಾವಿಸಿ ಆರೋಪಿಗಳು ಸಂತೋಷನ ಮೇಲೆ ಮಾರಕಾಸ್ತ್ರಗಳನ್ನು ಬೀಸಿದ್ದಾರೆ. ತಲೆ ಭಾಗಕ್ಕೆ ಗಂಭೀರ ಗಾಯವಾಗಿ, ರಕ್ತಸ್ರಾವ ಉಂಟಾಗಿ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಯಾರಿದು ಕಿರಣ್? ಆತನ ಹತ್ಯೆಗೇಕೆ ಸ್ಕೆಚ್?
ಸಂತೋಷ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೊದಲ ಆರೋಪಿಗೂ, ಕಿರಣ್’ಗೂ ಹಳೆ ದ್ವೇಷವಿದೆ. ಸೆಪ್ಟೆಂಬರ್ 19ರಂದು ಮೊದಲ ಆರೋಪಿ ಮೇಲೆ ಕಿರಣ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಿರಣನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಹಲ್ಲೆ ನಡೆಸುವ ಸಂದರ್ಭ ಕಿರಣ ಅವೆಂಜರ್ ಬೈಕ್ ಬಳಕೆ ಮಾಡಿದ್ದ. ಆಯುಧ ಪೂಜೆಯ ರಾತ್ರಿ ಸಂತೋಷನು ಅವೆಂಜರ್ ಬೈಕ್ ತಂದಿದ್ದ. ಹಾಗಾಗಿ ಕಿರಣನೆ ಬಂದು ನಿಂತಿದ್ದಾನೆ ಎಂದು ಭಾವಿಸಿ ಆರೋಪಿಗಳು ಹತ್ಯೆ ಮಾಡಿದ್ದಾರೆ.
ಆ ಹೊತ್ತಲ್ಲಿ ಸಂತೋಷ್ ಅಲ್ಲಿಗೇಕೆ ಹೋಗಿದ್ದು?
ಗೋಪಾಳ ಸಮೀಪದ ಸ್ವಾಮಿ ವಿವೇಕಾನಂದ ಬಡಾವಣೆಯ ಸಂತೋಷ್, ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪರಿಚಿತರೊಬ್ಬರ ಮನೆಗೆ ಹಬ್ಬದ ಊಟಕ್ಕೆ ಕರೆದಿದ್ದರಿಂದ ಅಲ್ಲಿಗೆ ತೆರಳಿದ್ದರು. ಈ ವೇಳೆ ಗಂಗಾಮತ ಹಾಸ್ಟೆಲ್ ಬಳಿ ಬೈಕ್ ನಿಲ್ಲಿಸಿಕೊಂಡಿದ್ದರು. ಆಗ ದುಷ್ಕರ್ಮಿಗಳು ಹಿಂಬದಿಯಿಂದ ಬಂದು ತಲೆಗೆ ಮಚ್ಚು ಬೀಸಿದ್ದಾರೆ.
ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.