SHIVAMOGGA LIVE NEWS | 24 AUGUST 2023
HOLEHONNURU : ಗಾಂಧಿ ಪ್ರತಿಮೆ (Gandiji Statue) ಧ್ವಂಸ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಚಿತ್ರದುರ್ಗ ಜಿಲ್ಲೆಯವರು ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸುದಿಗೋಷ್ಠಿ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ಗಣೇಶ್ (24) ಮತ್ತು ವಿನಯ್ (25) ಬಂಧಿತರು.
ಇದನ್ನೂ ಓದಿ – ಹೊಳೆಹೊನ್ನೂರು ಗಾಂಧಿ ಪ್ರತಿಮೆ ಧ್ವಂಸ, ಸಿಎಂ ಸಿದ್ದರಾಮಯ್ಯ ಆಕ್ರೋಶ
ಆರೋಪಿಗಳು ಕೃಷಿ ಕೆಲಸ ಮಾಡಿಕೊಂಡಿದ್ದರು. ಇವರ ಕುರಿತು ಲಭ್ಯವಾಗಿದ್ದ ಸುಳಿವಿನ ಆಧಾರದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆರೋಪಿಗಳು ಜೋಗಕ್ಕೆ ತೆರಳುವ ಮಾರ್ಗದಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸಗೊಳಿಸಿದ್ದರು. ದುಷ್ಕೃತ್ಯ ಎಸಗಿರುವ ಆರೋಪಿಗಳ ಹಿನ್ನೆಲೆ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗಾಗಿ 50 ಜನರ ವಿಶೇಷ ತಂಡ ರಚಿಸಲಾಗಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಹೊಳೆಹೊನ್ನೂರಿನ ಗಾಂಧಿ ಸರ್ಕಲ್ನಲ್ಲಿದ್ದ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಆ.20ರ ತಡರಾತ್ರಿ ದುಷ್ಕರ್ಮಿಗಳು ಧ್ವಂಸ ಮಾಡಿದ್ದರು. ಆ.21ರ ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಹೊಳೆಹೊನ್ನೂರಿನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ರಸ್ತೆ ತಡೆ ಮಾಡಿದ್ದರು. ಘಟನೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.