ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಸಂವಿಧಾನ ವಿರೋಧಿ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಜಾಪ್ರಭುತ್ವ ನಾಶ ಮಾಡುವುದಲ್ಲದೆ ಮನುಧರ್ಮ ಶಾಸ್ತ್ರವನ್ನು ಎತ್ತಿ ಹಿಡಿಯುತ್ತದೆ. ತಮಗಿಷ್ಟ ಬಂದಂತೆ ಸಂವಿಧಾನದ ಮೇಲೆ ನರ್ತನ ಮಾಡಲು ಈ ಕಾಯ್ದೆ ಸಹಾಯ ಮಾಡುತ್ತದೆ. ಇದಕ್ಕೆ ಮನುವಾದಿಗಳು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭಾರತದಲ್ಲಿ ನೂರಾರು ವರ್ಷಗಳಿಂದ ನಮ್ಮ ತಾತ, ಮುತ್ತಾತ, ಪೋಷಕರು ನೆಲೆಸಿದ್ದಾರೆ. ನಾವು ಇಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ಪಾಸ್ಪೋರ್ಟ್ ಹೊಂದಿದ್ದೇವೆ. ಅಧಿಕೃತವಾಗಿ ಇಲ್ಲಿನ ಪೌರರೆಂದು ಪರಿಗಣಿಸಲಾಗಿದೆ. ಹೀಗಿದ್ದ ಮೇಲೆ ನಮ್ಮ ಪೌರತ್ವ ಪ್ರಶ್ನಿಸಲು ಪ್ರಭುತ್ವಕ್ಕೆ ಯಾವ ಅಧಿಕಾರವೂ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎನ್ಆರ್ಸಿ ಈ ಎಲ್ಲ ದಾಖಲೆಗಳನ್ನು ಆಧಾರಿಸಿ, ಸ್ಥಳೀಯ ಪ್ರದೇಶಕ್ಕೆ ಎನ್ಆರ್ಸಿ ಕರಡನ್ನು ತಯಾರಿಸುತ್ತಾರೆ. ಕಡೆಯದಾಗಿ ಅಂತಿಮ ಎನ್ಆರ್ಸಿ ಪ್ರಕಟಿಸುತ್ತಾರೆ. ಇದರಿಂದ ಎನ್ಆರ್ಸಿಗೂ ಮತ್ತು ಎನ್ಪಿಆರ್ಗೂ ಸಂಬಂಧವೇ ಇಲ್ಲ. ಆದ್ದರಿಂದ ಈ ಮೂರು ಕಾಯ್ದೆಗಳನ್ನು ಜಾರಿಯಾಗದಂತೆ ತಡೆಯಬೇಕೆಂದು ಮನವಿ ಮಾಡಿದರು.
ಟಿ.ಎಚ್.ಹಾಲೇಶಪ್ಪ, ಎ.ಡಿ.ಆನಂದ್, ಎಂ.ಆರ್.ಶಿವಕುಮಾರ್ ಆಸ್ತಿ, ಬಿ.ಕೆ.ಹನುಮಂತಪ್ಪ, ಪಳನಿ, ಎಲ್.ರಂಗಸ್ವಾಮಿ, ಮಹಮ್ಮದ್ ನಿಹಾಲ್, ಸಲೀಂಖಾನ್, ನಾಸೀರ್ ಅಹ್ಮದ್, ಇಮ್ಮಿಯಾಜ್ ಇತರರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
