ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019
ಇವರದ್ದು ಡಿಫರೆಂಟ್ ಕನ್ನಡ ಪ್ರೇಮ..! ಪ್ರತಿ ದಿನವು ಈ ಅಂಗಡಿ ಮುಂದೆ ನಡೆಯುತ್ತೆ ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ..!
ಹೌದು. ಇಲ್ಲಿ ರಾಜ್ಯೋತ್ಸವ ನಿತ್ಯೋತ್ಸವವಾಗಿದೆ. ಮಕ್ಕಳ ಪಾಲಿಗೆ ಹೊಸ ವಿಚಾರ ತಿಳಿಯುವ ವೇದಿಕೆಯಾಗಿದೆ. ದುರ್ಗೀಗುಡಿಯಲ್ಲಿರುವ ಈ ಬೀಡಾ ಅಂಗಡಿಗೆ ಪ್ರತಿ ದಿನ ನೂರಕ್ಕು ಹೆಚ್ಚು ಮಕ್ಕಳು ಭೇಟಿ ನೀಡುತ್ತಾರೆ.
ಬೀಡಾ ಅಂಗಡಿಯಲ್ಲಿ ಏನಾಗುತ್ತೆ?
ದುರ್ಗೀಗಿಡಿಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಎದುರಿಗೆ ಇರುವ ಶ್ರೀ ದುರ್ಗಾ ಸ್ಟಾಲ್ ಬೀಡಾ ಅಂಗಡಿ, ಮಕ್ಕಳ ಪಾಲಿನ ಅಚ್ಚುಮೆಚ್ಚಿನ ತಾಣ. ಪ್ರತಿದಿನ ಬೆಳಗ್ಗೆ ಬೀಡಾ ಸ್ಟಾಲ್ ಮುಂದೆ ‘ತಿಳಿ ತಿಳಿಸಿ’ ಹೆಸರಿನಲ್ಲಿ ಸ್ಪರ್ಧೆ ನಡೆಯುತ್ತೆ. ಅಂಗಡಿ ಮುಂದೆ ಸಣ್ಣದೊಂದು ನೊಟೀಸ್ ಬೋರ್ಡಿನಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ನಾಲ್ಕು ಆಪ್ಷನ್ ಉತ್ತರಗಳನ್ನು ಕೊಡಲಾಗುತ್ತದೆ.

ರಾತ್ರಿ ನಡೆಯುತ್ತೆ ಲಕ್ಕಿ ಡ್ರಾ
ಉತ್ತರ ಬರೆಯುವವರಿಗೆ ಬೀಡಾ ಅಂಗಡಿಯಲ್ಲಿ ಸಣ್ಣದೊಂದು ಬಿಳಿ ಚೀಟಿ ಕೊಡಲಾಗುತ್ತದೆ. ಅದರಲ್ಲಿ ಉತ್ತರ, ನಿಮ್ಮ ಹೆಸರು, ಮೊಬೈಲ್ ನಂಬರ್ ಬರೆಯಬೇಕು. ಚೀಟಿಯನ್ನು ನೊಟೀಸ್ ಬೋರ್ಡ್’ನ ಕೆಳಗಿರುವ ಡಬ್ಬಿಯಲ್ಲಿ ಹಾಕಿದರೆ ಮುಗಿಯಿತು. ಪ್ರತಿದಿನ ರಾತ್ರಿ 8 ಗಂಟೆಗೆ ಲಕ್ಕಿ ಡ್ರಾ ನಡೆಯಲಿದೆ. ಇದರಲ್ಲಿ ಸರಿ ಉತ್ತರ ಬರೆದ ಮೂವರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಕನ್ನಡದ ಪುಸ್ತಕಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ.

ಐದು ವರ್ಷದಿಂದ ನಡೆಯುತ್ತಿದೆ ರಸಪ್ರಶ್ನೆ
ಶ್ರೀ ದುರ್ಗಾ ಸ್ಟಾಲ್’ನಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮ ಐದು ವರ್ಷದಿಂದ ನಡೆಯುತ್ತಿದೆ. ನವೆಂಬರ್ 1ರಿಂದ ನವೆಂಬರ್ 30ರವರೆಗೆ ಪ್ರತಿದಿನವು ರಸಪ್ರಶ್ನೆ ಇರಲಿದೆ. ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಬೇಕು, ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂಬುದು ಈ ರಸಪ್ರಶ್ನೆಯ ಆಯೋಜನೆಯ ಉದ್ದೇಶ.

ಮಕ್ಕಳಿಗಷ್ಟೇ ನಡೆಯುತ್ತೆ ಈ ಸ್ಪರ್ಧೆ
ಆರಂಭದಲ್ಲಿ ಎಲ್ಲರಿಗು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಆದರೆ ಈಗ ಶಾಲೆ ಮಕ್ಕಳಿಗಷ್ಟೇ ಸ್ಪರ್ಧೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಪ್ರತಿದಿನ ನೂರಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ದುರ್ಗೀಗುಡಿ ಸುತ್ತಮುತ್ತಲ ಏರಿಯಾದ ಮಕ್ಕಳಷ್ಟೇ ಅಲ್ಲ, ನಗರದ ವಿವಿಧ ಬಡಾವಣೆಯಿಂದಲು ಇಲ್ಲಿಗೆ ಬಂದು ಸ್ಪರ್ಧೆಯಲ್ಲಿ ಭಾಗವಹಿಸುವವರಿದ್ದಾರೆ.

ರಸಪ್ರಶ್ನೆ ನಡೆಸುತ್ತಿರುವುದು ಯಾರು?
ದುರ್ಗೀಗುಡಿಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸುತ್ತಿರುವುದು ಶ್ರೀ ದುರ್ಗಾ ಸ್ಟಾಲ್ ಮಾಲೀಕರಾದ ತ್ಯಾಗರಾಜ ಮಿತ್ಯಾಂತ. ಬೀಡಾ ಅಂಗಡಿ ನಡೆಸುವುದರ ಜೊತೆಗೆ ವಿವಿಧ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಚೆನ್ನುಡಿ ಬಳಗ ಎಂಬ ಸಾಮಾಜಿಕ ಸಂಘಟನೆಯು ಇದೆ. ಇದರ ಮೂಲಕವೆ ರಸಪ್ರಶ್ನೆ ಸ್ಪರ್ಧೆ ನಡೆಸುತ್ತಿದ್ದಾರೆ.

ರಾಜ್ಯೋತ್ಸವವನ್ನು ನವೆಂಬರ್ 1ಕ್ಕೆ ಸೀಮಿತ ಮಾಡಿಕೊಂಡಿರುವವರೆ ಹೆಚ್ಚು. ಆದರೆ ರಸಪ್ರಶ್ನೆ ಮೂಲಕ ನಾಡು, ನುಡಿಯ ಹಬ್ಬವನ್ನು ನಿತ್ಯೋತ್ಸವ ಮಾಡಿಕೊಂಡಿರುವ ತ್ಯಾಗರಾಜ ಮಿತ್ಯಾಂತ ಅವರ ಸೇವೆ ಅಭಿನಂದನಾರ್ಹ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]