ಶಿವಮೊಗ್ಗ ಲೈವ್.ಕಾಂ | SHIMOGA | 19 ಮಾರ್ಚ್ 2020
ಕರೋನ ಸೋಂಕು ತಗುಲುವ ಭೀತಿ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾಸ್ಕ್’ಗೆ ಬಹಳ ಡಿಮಾಂಡ್ ಹುಟ್ಟಿಕೊಂಡಿದೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ವ್ಯಾಪಾರಿಗಳು ಮಾಸ್ಕ್ ಹೆಸರಲ್ಲಿ ಹಣ ಮಾಡಲು ಇಳಿದಿದ್ದಾರೆ. ಕೆಲವು ಕಡೆ ನಕಲಿ ಮಾಸ್ಕ್’ಗಳನ್ನು ಮಾರಾಟ ಮಾಡಿ, ಜನರ ಪ್ರಾಣದ ಜೊತೆಗೆ ಚೆಲ್ಲಾಟ ಆಡಲಾಗುತ್ತಿದೆ.
ಮಾಸ್ಕ್ ಹೆಸರಲ್ಲಿ ನಡೆಯುತ್ತಿದೆ ಮಹಾ ದಂಧೆ
ಶಿವಮೊಗ್ಗದಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್’ಗೆ ಅಭಾವ ಎದುರಾಗಿದೆ. ಮೆಡಿಕಲ್ ಶಾಪ್’ಗಳಲ್ಲಿ ಮಾಸ್ಕ್ ಸಿಗುತ್ತಿಲ್ಲ. ಲಭ್ಯವಿರುವ ಅಲ್ಪಸ್ವಲ್ಪ ಮಾಸ್ಕ್’ಗಳಿಗೆ ಭಾರಿ ಡಿಮಾಂಡ್ ಇದೆ. ಆದರೆ ಕರೋನ ಭೀತಿ ಸೃಷ್ಟಿಯಾದ ಬಳಿಕ ಕೇಂದ್ರ ಸರ್ಕಾರ ಮಾಸ್ಕ್ ಮತ್ತ ಸ್ಯಾನಿಟೈಸರ್’ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿದೆ. ಹಾಗಾಗಿ ಇದನ್ನು ಅಧಿಕ ಬೆಲೆಗೆ ಮಾರುವಂತಿಲ್ಲ ಮತ್ತು ಮಾರಾಟಗಾರರು ಸದಾ ಸ್ಟಾಕ್ ಇಟ್ಟುಕೊಳ್ಳಬೇಕಿದೆ. ಆದರೆ ಜಿಲ್ಲೆಯಾದ್ಯಂತ ಮಾಸ್ಕ್ ಮತ್ತು ಸ್ಯಾನಿಟೈಸರ್ ಹೆಸರಿನಲ್ಲ ಮಹಾ ದಂಧೆಯೆ ನಡೆಯುತ್ತಿದೆ.
ದುಪ್ಪಟ್ಟು ಬೆಲೆಗೆ ಮಾರಾಟ
ಕೆಲವು ಮೆಡಿಕಲ್ ಶಾಪ್’ನಲ್ಲಿ ನಿಗದಿತ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವು ಕಡೆ ದುಪ್ಪಟ್ಟು ಬೆಲೆ ಮತ್ತು ಅದಕ್ಕಿಂತಲೂ ಹೆಚ್ಚಿನ ರೇಟಿಗೆ ಮಾಸ್ಕ್ ಮಾರಲಾಗುತ್ತಿದೆ. ಈ ಸಂಬಂಧ ಹಲವು ದೂರು ಬಂದ ಹಿನ್ನೆಲೆ, ಮೆಡಿಕಲ್ ಶಾಪ್, ಸಗಟು ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳ ಟೀಂ ರಚಿಸಲಾಗಿದೆ. ಈಗಾಗಲೇ ದಾಳಿ ಆರಂಭವಾಗಿದ್ದು, ಅಧಿಕಾರಿಗಳ ಟೀಂ ಧಿಡೀರ್ ದಾಳಿ ನಡೆಸುತ್ತಿದೆ.
ಹೇಗೆ ನಡೆಯುತ್ತಿದೆ ದಾಳಿ?
ಅನುಮಾನ ಬಂದ ಮೆಡಿಕಲ್ ಶಾಪ್’ಗಳಲ್ಲಿ ಸಾಮಾನ್ಯ ಜನರಂತೆ ಹೋಗಿ ಅಧಿಕಾರಿಗಳೆ ಮಾಸ್ಕ್ ಖರೀದಿಸುತ್ತಿದ್ದಾರೆ. ಬೆಲೆ ಹೆಚ್ಚಳ ಮಾಡಿ ಮಾರಾಟ ಮಾಡುವುದು ಗಮನಕ್ಕೆ ಬಂದರೆ ದಾಳಿ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಕೇಸ್ ಹಾಕಿ, ನೊಟೀಸ್ ಕೊಡುತ್ತಿದ್ದಾರೆ. ಇದು ಸಗಟು ವ್ಯಾಪಾರಿಗಳು ಮತ್ತು ಮೆಡಿಕಲ್ ಶಾಪ್ ಮಾಲೀಕರನ್ನು ಬೆಚ್ಚಿ ಬೀಳಿಸಿದೆ.

ದಾಳಿ ವೇಳೆ ನಕಲಿಗಳ ಹಾವಳಿ
ತುಂಬಾ ಸೂಕ್ಷ್ಮ ವಸ್ತುವಾದ್ದರಿಂದ ಮಾಸ್ಕ್ ಮಾರಾಟಕ್ಕೆ ನಿಯಮಗಳಿವೆ. ಹಾಗಾಗಿಯೆ ಯಾರೆಂದರೆ ಅವರು ಮಾಸ್ಕ್ ಮಾರಾಟ ಮಾಡುವಂತಿಲ್ಲ. ಆದರೆ ದಾಳಿ ವೇಳೆ ಕೆಲವು ದಿನಸಿ ಅಂಗಡಿಗಳಲ್ಲಿ, ಬೀಡಾ ಸ್ಟಾಲ್’ಗಳಲ್ಲೆಲ್ಲ ಮಾಸ್ಕ್ ಮಾರಾಟ ಮಾಡುತ್ತಿರುವ ಸಂಬಂಧ ದೂರುಗಳು ಬಂದಿವೆ. ಇಂತಹ ಅಂಗಡಿಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಸಾಮಾನ್ಯ ಬಟ್ಟೆ, ಬಟ್ಟೆ ಬ್ಯಾಗ್’ಗೆ ಬಳಸುವ ಮಾದರಿಯ ಬಟ್ಟೆಯಿಂದ ಮಾಸ್ಕ್ ತಯಾರಿಸಿದ ಪ್ರಕರಣಗಳು ವರದಿಯಾಗಿದೆ. ಇಂತಹ ಅಂಗಡಿಗಳ ಮೇಲೂ ಅಧಿಕಾರಿಗಳ ತಂಡ ರೇಡ್ ಮಾಡಿ, ಕೇಸು ಜಡಿದಿದೆ.

ನಕಲಿ ಮಾಸ್ಕ್ ಮಾರಾಟ, ದುಬಾರಿ ಬೆಲೆ ವಿಧಿಸುವುದು ತಿಳಿದು ಬಂದರೆ ಸಾರ್ವಜನಿಕರು ಕೂಡ ಜಿಲ್ಲಾಡಳಿತಕ್ಕೆ ದೂರು ನೀಡಬಹುದಾಗಿದೆ. ಇದರಿಂದ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸುಲಭವಾಗಿ ಸಾರ್ವಜನಿಕರಿಗೆ ಮಾಸ್ಕ್ ಲಭ್ಯವಾಗಲಿದೆ. ಅಲ್ಲದೆ ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳಲು ಯತ್ನಿಸುವ ಕೆಲವರಿಗೆ ಬಿಸಿ ಮುಟ್ಟಲಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]