ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 6 ಆಗಸ್ಟ್ 2019
ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಇನ್ನು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾರಿ ಮಳೆಯಿಂದಾಗಿ ತುಂಗೆ, ಮಾಲತಿ ಮತ್ತು ಕುಶಾವತಿ ನದಿಗಳು ತುಂಬಿ ಹರಿಯುತ್ತಿವೆ. ಮಳೆ ಪ್ರಮಾಣ ಹೆಚ್ಚಾದರೆ ಪ್ರವಾಹ ಪರಿಸ್ಥಿತಿ ಉಂಟಾಗುವ ಭೀತಿ ಎದುರಾಗಿದೆ. ಹಾಗಾಗಿ ನದಿ ಪಾತ್ರದಲ್ಲಿ ವಾಸಿಸುವವರು ಎಚ್ಚರದಿಂದ ಇರುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.
ಮರ ಬಿದ್ದು ವೃದ್ಧರಿಗೆ ಗಾಯ
ಮಳೆ, ಗಾಳಿಯಿಂದಾಗಿ ತಾಲೂಕಿನ ವಿವಿಧೆಡೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ತುಂಡಾಗಿವೆ. ಇದರಿಂದ ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ. ಇನ್ನು, ಮಂಡಗದ್ದೆ ಬಳಿ ಭಾರಿ ಗಾತ್ರ ಮರ ಬಿದ್ದಿದ್ದರಿಂದ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸೀತಮ್ಮ (65), ಶಂಕರಣ್ಣನಾಯ್ಕ (70) ಗಾಯಗೊಂಡಿದ್ದಾರೆ.

ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ
ತೀರ್ಥಹಳ್ಳಿ ತಾಲೂಕಿನಲ್ಲಿ ನಿರಂತರ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಹಾಗಾಗಿ ಅಧಿಕಾರಿಗಳು ಎಚ್ಚರದಿಂದ ಇರುವಂತೆ ಶಾಸಕ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ತಾಲೂಕು ಆಡಳಿತ, ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ಇಲಾಖೆ, ಮೆಸ್ಕಾಂ, ಅರಣ್ಯ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಕ್ಷೇತ್ರದಲ್ಲಿಯೇ ಇರಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]