SHIVAMOGGA LIVE NEWS | 19 OCTOBER 2023
SHIMOGA : ಗುತ್ತಿಗೆದಾರರ ಮೇಲಿನ ಐಟಿ ದಾಳಿ ಸಂಬಂಧ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಗೂಬೆ ಕೂರಿಸುತ್ತಿದೆ. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮಾಡಿದ್ದ ಬಿಜೆಪಿ ಈಗ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಎಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟೀಕಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್, ಯಾರದ್ದೋ ಮನೆಯಲ್ಲಿ ಹಣ ಸಿಕ್ಕರೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹೆಸರನ್ನು ಬಿಜೆಪಿ ಪ್ರಸ್ತಾಪಿಸುತ್ತಿದೆ. ಹಣ ಯಾರಿಗೆ ಸೇರಿದ್ದು ಎಂದು ಐಟಿ ಇಲಾಖೆ ಸಂಪೂರ್ಣ ತನಿಖೆ ನಡೆಸಲಿ. ಆದರೆ ಬಿಜೆಪಿಯವರು ವಿನಾಕಾರಣ ತಮ್ಮ ಮುಖಂಡರ ಹೆಸರು ಎಳೆದು ತರುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಈ ಹಿಂದೆ ಬಿಜೆಪಿಯವರು ಭ್ರಷ್ಟಚಾರ ಮಾಡಿ ಜೈಲಿಗೆ ಹೋಗಿದ್ದರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇನ್ನು, ಕೇಂದ್ರ ಸರ್ಕಾರ ಐಟಿ ಮತ್ತು ಇ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವೆರೆಡು ಇಲಾಖೆಯ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಶಿವಮೊಗ್ಗದಲ್ಲೇಕೆ ಇವರು ದಾಳಿ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರಿಗಳೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ಬಿಜೆಪಿ ಆಡಳಿತದ ಅವಧಿಯಲ್ಲಿ ಸಾವಿರಾರು ಕೋಟಿ ಸಾಲ ಮಾಡಿದ್ದರು. ಈಗ ಅದನ್ನು ನಮ್ಮ ಸರ್ಕಾರ ತೀರಿಸಬೇಕಾಗಿದೆ. ಕಾಮಗಾರಿಯ ಟೆಂಡರ್ ಕರೆಯುವ ಸಂದರ್ಭ ಬಿಜೆಪಿ ನಾಯಕರು ಹಣ ಕಬಳಿಸಿದ್ದರು. ಈಗ ಅಂತಿಮ ಬಿಲ್ ಪಾವತಿಸುವಾಗ ಕಾಂಗ್ರೆಸ್ ಮೇಲೆ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದ ಮಾಜಿ ಮಂತ್ರಿಯೊಬ್ಬರು ಈಗ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಸುತ್ತುತ್ತಿದ್ದಾರೆ. 50 ಕೋಟಿ ರೂ. ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ – ಶಿವಮೊಗ್ಗ ದಸರಾ, ಕಾರ್ಯಕ್ರಮಗಳ ಬಗ್ಗೆ ಜನರಿಗೆ ಏನೇನೂ ಗೊತ್ತಿಲ್ಲ, ಕೆಲವರಿಗಷ್ಟೆ ಸೀಮಿತವಾಯ್ತಾ ಉತ್ಸವ?
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ಎಸ್.ಟಿ.ಚಂದ್ರಶೇಖರ್, ಕಾಶಿ ವಿಶ್ವನಾಥ್, ಕಲೀಂ ಪಾಶ, ವೈ.ಹೆಚ್.ನಾಗರಾಜ್, ಮಧುಸೂದನ್ ಸೇರಿದಂತೆ ಹಲವರು ಇದ್ದರು.