ಶಿವಮೊಗ್ಗ ಲೈವ್.ಕಾಂ | SHIMOGA | 21 ಮಾರ್ಚ್ 2020
ಕರೋನ ಸೋಂಕು ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫೋ ಮಾಡುವಂತೆ ಮನವಿ ಮಾಡಿದ್ದರು. ಶಿವಮೊಗ್ಗ ನಗರದಲ್ಲಿಬೆಳಗ್ಗೆಯಿಂದಲೇ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದೆ.

ಈ ಹೊತ್ತಿಗೆ ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ?
ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಯಾಣಿಕರಿಗೆ ‘ಜನತಾ ಕರ್ಫ್ಯೂ’ನ ಬಿಸಿ ತಟ್ಟಿದೆ. ಕೆಎಸ್ಆರ್’ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಬಸ್ ಸಿಗದೆ ಪರದಾಡಿದರು. ಖಾಸಗಿ ಬಸ್’ಗಳು ಸೇವೆ ಸ್ಥಗಿತಗೊಳಿಸಿದ್ದರಿಂದ ದೂರದೂರುಗಳಿಂದ ಬಂದಿದ್ದ ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಕೊನೆಗೆ ಸಿಕ್ಕ ಬಸ್ಸು, ಟೆಂಪೋ, ಗೂಡ್ಸ್ ಆಟೋದಲ್ಲೇ ಶಿಕಾರಿಪುರ, ಸಾಗರ, ಸೊರಬ, ತೀರ್ಥಹಳ್ಳಿ ಕಡೆಗೆ ಪ್ರಯಾಣ ಬೆಳೆಸಬೇಕಾಯಿತು. ಹಲವು ಪ್ರಯಾಣಿಕರಿಗೆ ಬಸ್ಸುಗಳೇ ಸಿಗದರೆ ಬಸ್ ನಿಲ್ದಾಣದಲ್ಲೇ ಉಳಿಯುವಂತಾಗಿದೆ.
ಅಂಗಡಿ ಕ್ಲೋಸ್, ಹಾಲು ಕೂಡ ಸಿಗುತ್ತಿಲ್ಲ
ಹಾಲು, ಮೊಸರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಶಿಮುಲ್ ತಿಳಿಸಿತ್ತು. ಆದರೆ ಬಹುತೇಕ ಅಂಗಡಿಗಳು ಬಂದ್ ಆಗಿರುವುದರಿಂದ, ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಾಲು ಸಿಗದೆ ಜನರು ಪರಿದಾಡುತ್ತಿದ್ದಾರೆ.

ಜನತಾ ಕರ್ಫ್ಯೂನಲ್ಲಿ ಏನೇನಿರುತ್ತೆ? ಏನಿರಲ್ಲ?
ಜನತಾ ಕರ್ಫ್ಯೂ ಹಿನ್ನೆಲೆ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರೈಲುಗಳ ಸೇವೆ ಸ್ಥಗಿತಗೊಂಡಿದೆ. ಕೆಎಸ್ಆರ್’ಟಿಸಿ, ಖಾಸಗಿ ಬಸ್ಸು, ಆಟೋರಿಕ್ಷಾ, ಹೊಟೇಲ್, ದಿನಸಿ ಮತ್ತು ಇತರೆ ಅಂಡಿಗಳು, ಔಷಧಿ ಅಂಗಡಿ, ತರಕಾರಿ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದೇ ಕಾರಣಕ್ಕೆ ಶಿವಮೊಗ್ಗದ ರಸ್ತೆಗಳ ಜನ ಸಂಚಾರ ಸಂಪೂರ್ಣ ತಗ್ಗಿದೆ.

ತುರ್ತು ಸಂದರ್ಭಕ್ಕಷ್ಟೇ ಪೆಟ್ರೋಲ್
ಜನತಾ ಕರ್ಫ್ಯೂ ಹಿನ್ನೆಲೆ ಶಿವಮೊಗ್ಗದಲ್ಲಿ ಪೆಟ್ರೋಲ್ ಬಂಕ್’ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ ತುರ್ತು ಪರಿಸ್ಥಿತಿ, ಸರ್ಕಾರಿ ವಾಹನಗಳಿಗೆ ಇಂಧನದ ಅವಶ್ಯಕತೆ ಇರಬಹುದು ಎಂಬ ಕಾರಣಕ್ಕೆ, ಪ್ರತಿ ಪೆಟ್ರೋಲ್ ಬಂಕ್’ಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ತಲಾ ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]