ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 MARCH 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಾಲ್ಕು ದಿನದ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಚಾಲನೆ ಸಿಕ್ಕಿದೆ. ವಿವಿಧೆಡೆಯ ರೈತರು, ಕೃಷಿ ಕುರಿತ ಆಸಕ್ತರು ಮೇಳಕ್ಕೆ (Krushi Mela) ಬಂದು ಹಲವು ವಿಷಯಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಈ ಬಾರಿಯ ಮೇಳ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳನ್ನು ಕೂಡ ಸೆಳೆಯುತ್ತಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕೃಷಿ ಮೇಳದಲ್ಲಿ ಏನೇನಿದೆ?
ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಮತ್ತು ತೋಟಗಾರಿಕಾ ಮೇಳ (Krushi Mela) ಆಯೋಜಿಸಲಾಗಿದೆ. ಮಾರ್ಚ್ 20ರವರೆಗೆ ಮೇಳ ನಡೆಯಲಿದೆ.
ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ನಿರ್ಮಿಸಲಾಗಿದೆ. ಪ್ರತಿ ಸ್ಟಾಲ್ ನಲ್ಲಿಯು ಕೃಷಿ, ತೋಟಗಾರಿಕ, ಹೈನುಗಾರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.
ಗಮನ ಸೆಳೆದ ಕೀಟ ಪ್ರಪಂಚ
ರಾಜ್ಯದ ವಿವಿಧ ಕೃಷಿ ವಿವಿ, ಮಹಾವಿದ್ಯಾಲಯಗಳ ವಿವಿಧ ವಿಭಾಗಗಳ ವತಿಯಿಂದ ಪ್ರದರ್ಶಿನಿ ಆಯೋಜಿಸಲಾಗಿದೆ. ಮೂಡಿಗೆರೆಯ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿರುವ ಕೀಟ ಪ್ರಪಂಚ ಜನರ ಗಮನ ಸೆಳೆಯುತ್ತಿದೆ.
ಎಂಟಮಾಲಜಿ ವಿಭಾಗದ ವತಿಯಿಂದ ಕೀಟ ಪ್ರಪಂಚ ಪ್ರದರ್ಶಿನಿ ಆಯೋಜಿಸಲಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ಬಗೆಯ ಕೀಟಗಳನ್ನು ನೋಡಬಹುದಾಗಿದೆ. ಪ್ರಿಡೇಟರ್, ಪ್ಯಾರಸಿಟೈಟ್ ಕೀಟಗಳನ್ನು ಕಂಡು, ಅವುಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಮಕ್ಕಳು, ವಿದ್ಯಾರ್ಥಿಗಳು, ರೈತರು ಕೀಟಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ನೂರಾರು ಬಗೆಯ ಭತ್ತ
ಇನ್ನು, ಸಾವಯವ ಕೃಷಿ ಪ್ರದರ್ಶಿನಿಗು ಉತ್ತಮ ಸ್ಪಂದನೆ ಇದೆ. ರೈತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದರ್ಶನಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇಲ್ಲಿ ನೂರಕ್ಕೂ ಹೆಚ್ಚು ಬಗೆಯ ಭತ್ತದ ತಳಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೈವಿಕ ಗೊಬ್ಬರ, ಜೈವಿಕ ನಿಯಂತ್ರಕ, ಜೇನು, ಹಲವು ಬಗೆಯ ಧಾನ್ಯಗಳನ್ನು ಇಲ್ಲಿ ಕಾಣಬಹುದಾಗಿದೆ.
ಸಮಗ್ರ ಕೃಷಿ ಮಾಹಿತಿ
ಮೇಳದಲ್ಲಿ ರೈತರಿಗೆ ಸಮಗ್ರ ಕೃಷಿ ಮಾಹಿತಿ ಲಭಿಸಲಿದೆ. ಗೋಡಂಬಿ ಬೆಳೆ, ನೈಸರ್ಗಿಕ ಕೃಷಿ, ಅಡಕೆ ಸಂಶೋಧನೆ, ಕರಿಮೆಣಸು ಬೆಳಗಳು, ಬೀಜ ಮತ್ತು ಕಾಳುಗಳ ನಡುವೆ ವ್ಯತ್ಯಾಸ ತಿಳಿಸುವ ಬೀಜ ಘಟಕ, ಮೀನುಗಳ ಉತ್ಪಾದನೆ, ಭತ್ತದ ಗದ್ದೆಯಲ್ಲಿ ಮೀನು ಕೃಷಿ ಮತ್ತು ಅದರ ಉಪಯೋಗ, ಸಸ್ಯ ತಳಿ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಜಾಗೃತಿ ಸ್ಟಾಲ್ ಗಳು ರೈತರನ್ನು ಸೆಳೆಯುತ್ತಿದೆ.
ಕುತೂಹಲ ಕೆರಳಿಸುವ ಕೃಷಿ ಉಪಕರಣ
ಕೃಷಿ, ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿದೆ. ಕೃಷಿ ಮೇಳದಲ್ಲಿಯು ರೈತರು ಯಂತ್ರೋಪಕರಣಗಳ ಕುರಿತು ಕುತೂಹಲದಿಂದ ಮಾಹಿತಿ ಪಡೆಯುತ್ತಿದ್ದಾರೆ. ಕೃಷಿಯ ವಿವಿಧ ಹಂತದಲ್ಲಿ ಉಪಯೋಗಿಸುವ ಯಂತ್ರಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಮಂಗ, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಬಳಸುವ ಗನ್, ವಿವಿಧ ಕೀಟನಾಶಕ, ಗೊಬ್ಬರದ ಸ್ಟಾಲ್ ಗಳು ಇಲ್ಲಿದೆ.
ಮಹಿಳೆಯರ ಮನ ಗೆದ್ದ ಸ್ಟಾಲ್, ನರ್ಸರಿ
ಕೃಷಿ ಮೇಳದಲ್ಲಿ ಮಹಿಳೆಯರು, ನರ್ಸರಿ ಫಾರ್ಮಿಂಗ್ ಕುರಿತು ಆಸಕ್ತಿ ಹೊಂದಿರುವವರಿಗೆ ಹಲವು ವಿಶೇಷ ಮಾಹಿತಿ ಲಭಿಸಲಿದೆ. ವಿವಿಧ ತಿಂಡಿ, ತಿನಿಸುಗಳು, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ವತಿಯಿಂದ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ, ಮಾರಾಟ ಆಯೋಜಿಸಲಾಗಿದೆ.
ಇನ್ನು, ನರ್ಸರಿ ಫಾರ್ಮಿಂಗ್ ಮಾಡುವವರಿಗೆ ವಿವಿಧ ಫಾರ್ಮಾ ಮತ್ತು ನರ್ಸರಿಗಳಿಂದ ಪ್ರದರ್ಶನ ಆಯೋಜಿಸಲಾಗಿದೆ. ಆಸಕ್ತರು ಫಾರ್ಮಿಂಗ್ ಕುರಿತು ಮಾಹಿತಿ ಪಡೆದು ಗಿಡಗಳನ್ನು ಕೊಳ್ಳಬಹುದಾಗಿದೆ.
ಮೊದಲ ದಿನವೇ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಉತ್ತಮ ಸ್ಪಂದನೆ ಲಭಿಸಿದೆ. ವಿವಿಧೆಡೆಯಿಂದ ರೈತರು, ಸಾರ್ವಜನಿಕರು ಆಗಮಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಲಕ್ಷ್ಮಿ ಟಾಕೀಸ್ ಇನ್ನು ನೆನಪಷ್ಟೇ, ಟಾಕೀಸ್ ಬಗ್ಗೆ ನಿಮಗೆಷ್ಟು ಗೊತ್ತು? ಮುಂದೇನಾಗುತ್ತೆ ಇಲ್ಲಿ?