ಶಿವಮೊಗ್ಗ ಲೈವ್.ಕಾಂ | 13 ಮಾರ್ಚ್ 2019
ಅಭ್ಯರ್ಥಿ ಘೋಷಣೆಯಾಗಿ ಎರಡು ವಾರ ಕಳೆದರೂ ಮೈತ್ರಿ ಪಕ್ಷಗಳ ಪ್ರಚಾರ ಇನ್ನೂ ಶುರುವಾಗಿಲ್ಲ. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರಿನ್ನೂ ಪ್ರಚಾರ ಕಣಕ್ಕೆ ಇಳಿದಿಲ್ಲ. ಇದು ರಾಜಕೀಯ ವಲಯದಲ್ಲಿ ಕುತೂಹಲ ಮತ್ತು ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಫೆಬ್ರವರಿ 25ರಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿರುವ ಮಧು ಬಂಗಾರಪ್ಪ ಅವರ ಮನೆಗೆ ಭೇಟಿ ನೀಡಿ, ಶಿವಮೊಗ್ಗದ ಅಭ್ಯರ್ಥಿ ಎಂದು ಘೋಷಿಸಿದ್ದರು. ಮರುದಿನ ಶಿವಮೊಗ್ಗಕ್ಕೆ ಆಗಮಿಸಿದ್ದ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿದ್ದರು. ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಸಮಯದ ಅಭಾವವಿತ್ತು ಎಂದು ಸ್ಪಷ್ಟಪಡಿಸಿದ್ದರು.
ಅಲ್ಪಾವಧಿ ಪ್ರಚಾರದಲ್ಲೇ ದೊಡ್ಡ ಸ್ಪರ್ಧೆ
ಇತ್ತೀಚೆಗೆ ನಡೆದ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಅಲ್ಪವಾಧಿ ಪ್ರಚಾರ ಮಾಡಿದ್ದರೂ, ಮಧು ಬಂಗಾರಪ್ಪ ಅವರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಭಾರೀ ಪೈಪೋಟಿಯನ್ನೇ ನೀಡಿದ್ದರು. 50 ಸಾವಿರ ಮತಗಳ ಅಂತರದಲ್ಲಿ ಮಧು ಬಂಗಾರಪ್ಪ ಸೋಲನುಭವಿಸಿದ್ದರು. ಮೈತ್ರಿ ಪಕ್ಷದ ಅಭ್ಯರ್ಥಿ ಸೋಲನುಭವಿಸಿದ್ದರೂ, ರಾಘವೇಂದ್ರ ಗೆಲುವಿನ ಅಂತರ ಕಡಿಮೆ ಇದ್ದಿದ್ದು, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತ್ತು. ಆದರೆ, ಈ ಬಾರಿ ಚುನಾವಣೆ ಘೋಷಣೆಗೂ ಮೊದಲೇ, ಮಧು ಬಂಗಾರಪ್ಪ ಶಿವಮೊಗ್ಗದ ಅಭ್ಯರ್ಥಿ ಎಂದು ಘೋಷಣೆಯಾಗಿತ್ತು. ಆದರೆ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ.

ಮೈತ್ರಿ ಪಕ್ಷಗಳ ಕ್ಯಾಂಪೇನ್ ಶುರುವಾಗೋದ್ಯಾವಾಗ?
ಶಿವಮೊಗ್ಗಕ್ಕೆ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಅವರೇ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತ. ಇದೇ ಕಾರಣಕ್ಕೆ, ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರಚಾರ ಶುರು ಮಾಡಿಕೊಂಡಿದೆ. ಚುನಾವಣೆ ಘೋಷಣೆಗೂ ಮೊದಲೇ ರಾಘವೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರು ಕ್ಯಾಂಪೇನ್ ಆರಂಭಿಸಿದ್ದಾರೆ. ಆದರೆ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಗೊಂದಲದಿಂದ ಪ್ರಚಾರ ಆರಂಭಿಸಿರಲಿಲ್ಲ.

ಈಗಾಗಲೇ ಜಿಲ್ಲೆಯಾದ್ಯಂತ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಮತ್ತೊಂದು ಸುತ್ತು ಕಾರ್ಯಕರ್ತರು, ಬೂತ್ ಮಟ್ಟದ ಪ್ರಮುಖರ ಸಭೆ ನಡೆಸಿ, ಕಾಂಗ್ರೆಸ್ ಪಕ್ಷದವರೊಂದಿಗೆ ಚರ್ಚಿಸಿ, ಪ್ರಚಾರ ನಡೆಸುತ್ತೇವೆ ಅಂತಾರೆ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ.
ಇನ್ನು, ಕಾಂಗ್ರೆಸ್ ಪಕ್ಷ ಕೂಡ ಪ್ರಚಾರಕ್ಕೆ ಪ್ಲಾನಿಂಗ್ ಮಾಡಿಕೊಂಡಿದೆ. ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಮಧು ಬಂಗಾರಪ್ಪ ಅವರೊಂದಿಗೆ ಸಭೆ ನಡೆಸಿ, ಪ್ರಚಾರ ಶುರು ಮಾಡುತ್ತೇವೆ ಅಂತಾರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್.

ಬಿಜೆಪಿ ವಿರುದ್ಧ ಕಾರ್ಯಕರ್ತರ ವಾರ್
ಶಿವಮೊಗ್ಗದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಲಿ, ಪಕ್ಷದ ಮುಖಂಡರಾಗಲಿ ಇನ್ನು ಪ್ರಚಾರದ ಅಖಾಡಕ್ಕೆ ಧುಮುಕ್ಕಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆರೋಪಗಳಿ, ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿನ ನ್ಯೂನತೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಅರಣ್ಯ ಹಕ್ಕು ಕಾಯ್ದೆ ಮತ್ತು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ವಿಚಾರವನ್ನೂ ಬಿಜೆಪಿ ಪಾಲಿಗೆ ಪ್ರಬಲ ಅಸ್ತ್ರವಾಗಿಸಿಕೊಂಡಿದೆ. ಆದರೆ ಈ ಸಂಕಷ್ಟಕ್ಕೆ ಬಿಜೆಪಿ ಪಕ್ಷವೇ ಕಾರಣ ಅಂತಾ ಆರೋಪಿಸುವ ಮೂಲಕ ತಿರುಗೇಟು ಕೊಡುವ ಪ್ರಯತ್ನಗಳನ್ನೂ ಕೆಲವೇ ಕೆಲವು ಕಾಂಗ್ರೆಸಿಗರು ಮಾಡುತ್ತಿದ್ದಾರೆ.
ಅಭ್ಯರ್ಥಿಯೇ ಪ್ರಚಾರಕ್ಕೆ ಬಾರದೆ, ಮುಖಂಡರಾರು ಅಖಾಡಕ್ಕೆ ಇಳಿಯದೇ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಬೇಸರ ಮತ್ತು ಅಚ್ಚರಿಕೆ ಕಾರಣವಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]