ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020
ಫೆಬ್ರವರಿ 25ರಿಂದ ಐದು ದಿನ ನಡೆಯಲಿರುವ ಶಿವಮೊಗ್ಗ ಮಾರಿಕಾಂಬ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ದೇವಸ್ಥಾನ ಮುಂಭಾಗದ ರಸ್ತಯಲ್ಲಿ ಪೆಂಡಾಲ್ ಹಾಕಲಾಗಿದೆ. ದೇಗುಲದ ಮುಂದೆ ಚಪ್ಪರ ಹಾಕುವ ಕಾರ್ಯ ನಡೆಯುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಫೆ.25ರಂದು ಮಾರಿದೇವಿಯನ್ನು ಗಾಂಧಿ ಬಜಾರ್ನಲ್ಲಿ ಕೂರಿಸಲಾಗುತ್ತಿದ್ದು ಅಲ್ಲಿ ಪೇಂಟಿಂಗ್, ದ್ವಾರ ಬಾಗಿಲಿನ ಸಿದ್ಧತೆ ನಡೆಯುತ್ತಿದೆ. ಈ ಬಾರಿ ವಿಐಪಿ ಪಾಸ್ಗಳನ್ನು ಸ್ಥಳದಲ್ಲೇ ನೀಡಲಾಗುವುದು, 150 ರೂ.ಗೆ ಪಾಸ್ ನೀಡಲಿದ್ದು ಮೂವರು ಪ್ರವೇಶಿಸಬಹುದು ಎಂದರು.
ಗದ್ದುಗೆಯಲ್ಲಿ ಪ್ರಾಣಿ ಬಲಿ ಇಲ್ಲ
ಗದ್ದುಗೆಯಲ್ಲಿ ಯಾವ ಪ್ರಾಣಿ ಬಲಿ ಕೊಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಎಸ್.ಕೆ.ಮರಿಯಪ್ಪ, ಸಿಎಂ ಬಿ.ಎಸ್.ಯಡಿಯೂರಪ್ಪ ಫೆ.25ರಂದು ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು ಮಾರಿಕಾಂಬೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವರು ಎಂದರು.

ಕಲಾ ತಂಡಗಳು
ಕರಾವಳಿ ತಂಡದಿಂದ ತಮಟೆ ವಾದ್ಯ ಕರೆಯಿಸಲಾಗುವುದು. ಗರಡಿ ಮನೆಗಳಿಗೆ ಸಮಿತಿ ಭೇಟಿ ನೀಡಿ ರಾಜ್ಯಮಟ್ಟದ ಕುಸ್ತಿಪಟುಗಳನ್ನು ಕರೆಸಲಾಗುತ್ತಿದೆ. ಸಾಗರದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿಜಯಶಾಲಿ ಆದ ಶಿವಮೊಗ್ಗದ ಕೆಇಬಿ ನೌಕರ ನಾಗರಾಜ್ ಅವರ ಪುತ್ರ ಕಿರಣ್ ಸಹ ಭಾಗವಹಿಸುವರು ಎಂದು ತಿಳಿಸಿದರು.

ಒಂದೂವರೆ ಕೆಜಿಯ ಬೆಳ್ಳಿ ಗದೆ
ಕುಸ್ತಿಗಾಗಿ ಬೆಂಗಳೂರಿನಿಂದ 1 ಕೆಜಿ 500 ಗ್ರಾಂ ತೂಕದ ಬೆಳ್ಳಿ ಗದೆ ತರಿಸಲಾಗಿದೆ. ಕುಸ್ತಿ ಪಂದ್ಯಾವಳಿಗೆ 400 ಜನರನ್ನು ಕರೆಸಲಾಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗೆದ್ದ ಪಟುವಿಗೆ ಬೆಳ್ಳಿಗದೆ, 25 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ವಿವಿಧತೆಯಲ್ಲಿ ಏಕತೆಯ ಜಾತ್ರೆ
ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ, ಈ ಜಾತ್ರೆ ಕೇವಲ ಹಿಂದುಳಿದ ಸಮಾಜದವರ ಜಾತ್ರೆ ಎನಿಸಿಕೊಂಡಿತ್ತು. ಆದರೆ ಈಗ ಆ ರೀತಿ ಕರೆಯಲಾಗುತ್ತಿಲ್ಲ. ವಿವಿಧತೆಯಲ್ಲಿ ಏಕತೆ ಸಾರುವ ಜಾತ್ರೆಯಲ್ಲಿ ಸಾಮಾನ್ಯವಾಗಿ ಎಲ್ಲ ಸಮಾಜದವರಿಂದ ಅಮ್ಮನವರ ಪೂಜಾ ಕೈಂಕರ್ಯ ನಡೆಯಲಿವೆ. ಗಾಂಧಿ ಬಜಾರ್ ಮತ್ತು ಗದ್ದುಗೆ ಬಳಿ 5 ದಿನವೂ ಬೆಳಗ್ಗೆ 8 ರಿಂದ 12ರವರೆಗೆ ವಿಶೇಷ ದರ್ಶನ ಏರ್ಪಡಿಸಲಾಗಿದೆ ಎಂದರು.

ಸಮತಿ ಉಪಾಧ್ಯಕ ಕೆ.ಎನ್.ಶ್ರೀನಿವಾಸ್, ಎನ್.ಉಮಾಪತಿ, ಕೋಶಾಧ್ಯಕ್ಷ ತಿಮ್ಮಪ್ಪ, ಕಾರ್ಯದರ್ಶಿ ಎಸ್.ಹನುಮಂತಪ್ಪ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]