ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2019
ಅತಿವೃಷ್ಟಿ ಕುರಿತು ಪರಿಶೀಲನಾ ಸಭೆ ನಡೆಸಬೇಕಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರು ಬಿಟ್ಟು ಕಳೆಗಿಳಿಯುತ್ತಿಲ್ಲ. ಕಂದಾಯ ಸಚಿವರು ಚಿಕ್ಕಮಗಳೂರು ಬಿಟ್ಟು ಬೇರಾವ ಜಿಲ್ಲೆಗು ತೆರಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ದಿವಾಕರ್ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ದಿವಾಕರ್, ಅತಿವೃಷ್ಟಿ ಸಂದರ್ಭವನ್ನು ನಿಭಾಯಿಸುವ ಪ್ರಮುಖ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳ ಮೇಲಿರುತ್ತದೆ. ಆದರೆ ಗ್ರಾಮೀಣಾಭಿವೃದ್ದಿ ಸಚಿವರು ಕಾರು ಬಿಟ್ಟು ಕೆಳಗಿಳಿಯುವುದಿಲ್ಲ ಅನ್ನುವುದಕ್ಕೆ ಬೆಳಗಾವಿಯಲ್ಲಿ ಆದ ಘಟನೆಯೆ ನಿದರ್ಶನವೆಂದರು.
ಪರಿಹಾರವಿಲ್ಲ, ಪರಿಶೀಲನಾ ಸಭೆಗಳು ಇಲ್ಲ
ಕಂದಾಯ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಅತಿವೃಷ್ಟಿ ಕುರಿತು ಪರಿಶೀಲನಾ ಸಭೆಗಳನ್ನು ನಡೆಸಬೇಕು. ಆದರೆ ಎಲ್ಲಿಯು ಸಭೆಗಳು ಆಗುತ್ತಿಲ್ಲ. ಪರಿಹಾರಕ್ಕೆ ಹಣವಿಲ್ಲದೆ ಇರುವುದೆ ಪರಿಶೀಲನಾ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣ ಎಂದು ದಿವಾಕರ್ ಆರೋಪಿಸಿದರು.

ಸೌಜನ್ಯಕ್ಕು ಸಿಎಂ ಭೇಟಿಗೆ ಅವಕಾಶ ಕೊಡ್ತಿಲ್ಲ
ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲು. ಆದರು ಕೇಂದ್ರ ಸರ್ಕಾರ ಪರಿಹಾರ ಕೊಡುತ್ತಿಲ್ಲ. ರಾಜ್ಯ ಮುಖ್ಯಮಂತ್ರಿಯನ್ನು ಪ್ರಧಾನಿ ಮೋದಿ ಅವರು ಸೌಜನ್ಯಕ್ಕು ಭೇಟಿ ಮಾಡುತ್ತಿಲ್ಲ. ಹಾಗಾಗಿ ಈ ಕೂಡಲೆ ದೇವೇಗೌಡರು, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ ಅವರಂತ ಹಿರಿಯರನ್ನು ಒಳಗೊಂಡ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ ಎಂದು ದಿವಾಕರ್ ಸಲಹೆ ನೀಡಿದರು.

ಸಿದ್ದರಾಮಯ್ಯ ಅವರನ್ನು ಟೀಕಿಸುವುದು ನಿಲ್ಲಿಸಿ
ಪರಿಹಾರ ಕಾರ್ಯ ಕೈಗೊಳ್ಳುವ ಬದಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಾರದಲ್ಲಿ ನಾಲ್ಕು ದಿನ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ. ಹಾಗೆ ಟೀಕಿಸುವ ಮೂಲಕ ರಾಜ್ಯ ಮಟ್ಟದ ನಾಯಕನಾಗಬಹುದು, ಸಮುದಾಯದ ಮುಖಂಡನಾಗಬಹುದು ಅಂದುಕೊಂಡಿದ್ದಾರೆ. ಅದರೆ ಅದು ಸಾದ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಪ್ರಮುಖರಾದ ಚಂದ್ರಭೂಪಾಲ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]