SHIVAMOGGA LIVE NEWS | 11 NOVEMBER 2023
SHIMOGA : ತಾಲೂಕಿನ ಪಂಚಾಯಿತಿ ಸಿರಿಗೆರೆ ಗ್ರಾಮ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಮಲೆಶಂಕರ, ಮಂಜರಿಕೊಪ್ಪ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ತೋಟ ಮತ್ತು ಗದ್ದೆಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡಿದೆ.
ಪುರದಾಳು ಗ್ರಾ.ಪಂ ವ್ಯಾಪ್ತಿಯ ನಾಗಮ್ಮ ಕಾಲೋನಿ, ದುರ್ಗಾಂಬ ಕಾಲೋನಿಯಲ್ಲೂ ಕಾಡಾನೆ ಉಪಟಳ ಹೆಚ್ಚಾಗಿದೆ. ಭತ್ತ, ಅಡಿಕೆ, ಬಾಳೆ, ಜೋಳ, ಶುಂಠಿ ಸೇರಿದಂತೆ ಹಲವು ಬೆಳೆಗಳನ್ನು ಕಾಡಾನೆ ಹಿಂಡು ನಾಶಪಡಿಸಿವೆ.
ಇದನ್ನೂ ಓದಿ- ಶಿವಮೊಗ್ಗ ನಗರದಲ್ಲಿ ಮಳೆ ಅಬ್ಬರ, ಇನ್ನೆರಡು ದಿನ ಮುಂದುವರೆಯುತ್ತೆ ಗುಡುಗು ಸಹಿತ ಆರ್ಭಟ
ಮರಗಳ ಮೇಲೆ ವಾಚ್ ಟವರ್ ನಿರ್ಮಿಸಿ, ರಾತ್ರಿ ಇಡೀ ಫಸಲನ್ನು ಕಾಯಲು ರೈತರು ಮುಂದಾಗಿದ್ದಾರೆ. ಆದರೂ, ಗುಂಪು ಗುಂಪಾಗಿ ದಾಳಿ ನಡೆಸಿ ಆನೆಗಳು ಬೆಳೆ ನಾಶ ಪಡಿಸುತ್ತಿವೆ. ಭದ್ರಾ ಅಭಯಾರಣ್ಯದಿಂದ ಬಂದ ಆನೆಗಳು ನಿರಂತರ ದಾಳಿ ಮಾಡುತ್ತಿವೆ. ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಹೆಚ್ಚು ದಾಳಿ ಮುಂದುವರಿದಿದೆ. ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ವಾಪಸ್ ಕಳುಹಿಸುವ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಶಾಸಕಿ ಗರಂ
ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಲೆಶಂಕರ, ಸಿರಿಗೆರೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಕುರಿತು ಶಾಸಕಿ ಶಾರದಾ ಪೂರ್ಯಾನಾಯ್ಕ್ (sharada puryanaik) ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದರು. ಬೆಳೆ ಹಾನಿಯಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಕಾಡಾನೆ ಉಪಟಳ ತಡೆಯಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದರು.
